Home ಜಿಲ್ಲೆ ಕತ್ತೆಗೆ ತೋರಿಸುವ ಕನಿಕರ ರೈತರಿಗಿಲ್ಲವೇ?:ಕುಲಕರ್ಣಿ

ಕತ್ತೆಗೆ ತೋರಿಸುವ ಕನಿಕರ ರೈತರಿಗಿಲ್ಲವೇ?:ಕುಲಕರ್ಣಿ

ತಾಳಿಕೋಟೆ: ತಾಳಿಕೋಟೆ ಸೇರಿದಂತೆ ವಿಜಯಪುರ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಪರಿಹಾರ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಕಳೆದ ೧೭ ದಿನಗಳಿಂದ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟ ಧರಣಿ ಮುಂದುವರಿದಿದೆ.
ಶನಿವಾರ ೧೭ನೇ ದಿನದ ಧರಣಿ ಸಂದರ್ಭದಲ್ಲಿ ತಾಳಿಕೋಟೆ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತ ಸಂಘದ ಮುಖಂಡರು ಕತ್ತೆ ಚಳುವಳಿ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಕತ್ತೆ ಚಳುವಳಿಯನ್ನು ತಡೆದು, ಅಖಂಡ ಕರ್ನಾಟಕ ರೈತ ಸಂಘದ ತಾಳಿಕೋಟಿ ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಹಾಗೂ ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಅವರನ್ನು ಕತ್ತೆಗಳ ಸಮೇತ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ.
ಸರ್ಕಾರದ ಈ ಕ್ರಮವನ್ನು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ನಿಡಗುಂದಿ ತಾಲೂಕು ಅಧ್ಯಕ್ಷ ಸೀತಪ್ಪ ಗಣಿ ಖಂಡಿಸಿದ ಅವರು ಕತ್ತೆ ಚಳುವಳಿ ನಡೆಸುವುದು ಪ್ರಾಣಿ ಹಿಂಸೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ೧೭ ದಿನಗಳಿಂದ ಮನೆ-ಮಠ ಬಿಟ್ಟು ರೈತರು ಹೋರಾಟ ನಡೆಸುತ್ತಿದ್ದರೂ ಅವರ ಸಂಕಷ್ಟದ ಬಗ್ಗೆ ಸರ್ಕಾರ ಕರುಣೆ ತೋರಿಸುತ್ತಿಲ್ಲ. ಕತ್ತೆಯ ಮೇಲೆ ಕರುಣೆ ತೋರಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೇಡಿಕೆಗಳ ಕುರಿತು ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟದ ಸ್ವರೂಪವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ ಅವರು, ಬುಧವಾರದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಅದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹಂತದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹೋರಾಟದ ಸಂದರ್ಭದಲ್ಲಿ ಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.
ರೈತ ಮುಖಂಡರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿರುವದನ್ನು ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ನಂತರ ರೈತ ಮುಖಂಡರನ್ನು ಪೊಲೀಸ್‌ರು ಬಿಡುಗಡೆಗೊಳಿಸಿ ಕಳುಹಿಸಿದರು.
ಧರಣಿಯಲ್ಲಿ ಜಿಲ್ಲಾಧ್ಯಕ್ಷ ಉಮೇಶ್ ವಾಲಿಕರ್, ಸೀತಪ್ಪ ಗಣಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ, ನೀಲಂಬಿಕಾ ಬಿರಾದಾರ, ದಾದು ಪಟೇಲ್ ಬಿರಾದಾರ, ದೇವೇಂದ್ರ ವಡ್ಡರ, ಬಸವರಾಜ ಹೊಸಳ್ಳಿ, ಹನುಮಂತ ಕಲಗುರ್ಕಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸೋಮನಗೌಡ ಹಾದಿಮನಿ, ಬ್ಯಾಕೋಡ ಗ್ರಾಮ ಅಧ್ಯಕ್ಷ ಬಸವರಾಜ ಹೇರೂರ, ವೆಂಕಟೇಶ ವಡ್ಡರ, ಶರಣಬಸು ಹೇರೂರ, ಎಸ್.ಕೆ. ಗುತ್ತಗಿ, ಶ್ರೀನಿವಾಸ ಗೊಟಗುಣಕಿ, ವೀರಪ್ಪ ದೊರಣಹಳ್ಳಿ, ಬಸನಗೌಡ ಪಾಟೀಲ, ನಾನಾಗೌಡ ಮುದ್ದುರ, ಅಶೋಕ ಬಿರಾದಾರ, ಬಸನಗೌಡ ಚಕ್ಕಳಕಿ, ಶಂಕರಪ್ಪ ಪೂಜಾರ, ಗುರುಸಿದ್ದ ಚಕ್ಕಳಕಿ, ಶಾಂತಗೌಡ ಬಿರಾದಾರ, ಪ್ರಕಾಶ ಬಡಿಗೇರ, ಮಲ್ಲನಗೌಡ ಕೊಡಗಾನೂರ, ಮಲ್ಲನಗೌಡ ಬಿರಾದಾರ, ವೀರಭದ್ರಯ್ಯ ಹಿರೇಮಠ, ಎಸ್.ಬಿ. ಸಜ್ಜನ, ಬಸಣ್ಣ ಕುಂಬಾರ, ಆನಂದ ಲಿಂಗದಳ್ಳಿ, ಪ್ರಭುಗೌಡ ಬಿರಾದಾರ, ಸಿದ್ದನಗೌಡ ಜಾಲವಾದಿ, ಮಾಳು ವಾಲಿಕಾರ, ಅರುಣಗೌಡ ಬಿರಾದಾರ, ದೇಸಾಯಿ ತುಂಬಗಿ, ಶಾಂತಪ್ಪ ಹೂಬಾಳ, ರಾಮನಗೌಡ ಯಾಳವಾರ, ಜಟೆಪ್ಪ ಕವಡಿಮಿಟ್ಟಿ, ಶ್ರೀನಿವಾಸ ಬೊಮ್ಮನಳ್ಳಿ ಸೇರಿದಂತೆ ರೈತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.