Home ಜಿಲ್ಲೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಸೂಚನಾ ಫಲಕ ಅಳವಡಿಸಿ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಸೂಚನಾ ಫಲಕ ಅಳವಡಿಸಿ

ಬೀದರ್: ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)ಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಹೆಸರು ನಮೂದಿಸುವ ಸೂಚನಾ ಫಲಕ ಅಳವಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.
ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಬ್ರಿಮ್ಸ್ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಬ್ರಿಮ್ಸ್ ಅಧಿಕಾರಿಗೆ ಸಲ್ಲಿಸಿದರು.
ಅನೇಕ ಬಡ ರೋಗಿಗಳು ಅನಾರೋಗ್ಯದಿಂದ ಆಸ್ಪತ್ರೆಗೆ ಬರುತ್ತಾರೆ. ಆದರೆ, ವೈದ್ಯರು ಕರ್ತವ್ಯದ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ. ಹೀಗಾಗಿ ಸೂಚನಾ ಫಲಕದಲ್ಲಿ ಕರ್ತವ್ಯ ನಿರತರ ಹೆಸರು ನಮೂದಿಸುವುದು ಅವಶ್ಯಕವಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಗಮನ ಸೆಳೆದರು.
ಆಸ್ಪತ್ರೆಯಲ್ಲಿ ಆಯಾ ದಿನ ಕಾರ್ಯ ನಿರ್ವಹಿಸುವ ವೈದ್ಯರ ಹೆಸರು, ಅವರ ಲಭ್ಯತೆಯ ಅವಧಿ, ವೈದ್ಯರು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಯಾವ ಮೊಬೈಲ್ ಸಂಖ್ಯೆಗೆ ದೂರು ಕೊಡಬೇಕು ಎನ್ನುವುದನ್ನು ಸೂಚನಾ ಫಲಕದಲ್ಲಿ ನಿತ್ಯ ನಮೂದಿಸಬೇಕು ಎಂದು ಬೇಡಿಕೆ ಮಂಡಿಸಿದರು.
ರೋಗಿಗಳ ಅನುಕೂಲಕ್ಕಾಗಿ ಎಲ್ಲ ಬೆ???ಗಳ ಮೇಲೆ ಬೆಡ್ ಶೀಟ್ ಹಾಕಬೇಕು. ತಲೆದಿಂಬುಗಳನ್ನು ಇಡಬೇಕು. ಸಂಸ್ಥೆಯಲ್ಲಿನ ಆಡಳಿತಾತ್ಮಕ ಹಾಗೂ ಸೇವಾ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ದತ್ತಾತ್ರಿ ಅಲ್ಲಂಕೆರೆ, ಶಿವರುದ್ರ ತೀರ್ಥ, ಬೀದರ್ ಉತ್ತರ ಘಟಕದ ಅಧ್ಯಕ್ಷ ಅನಿಲ್ ರಾಜಗಿರೆ, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಆದಿತ್ಯ ರೆಡ್ಡಿ, ಬೀದರ್ ತಾಲ್ಲೂಕು ಘಟಕದ ಉಪಾಧ್ಯಕ್ಷ ಅನಿಲ್ ರೆಡ್ಡಿ, ಸಾಮಾಜಿಕ ಜಾಲತಾಣ ವಿಭಾಗದ ಸಂಗಮೇಶ ಬಿರಾದಾರ ನಿಯೋಗದಲ್ಲಿ ಇದ್ದರು.