Home ಜಿಲ್ಲೆ ದೇವರ ಹಿಪ್ಪರಗಿ ತಾಲೂಕು ಬರಗಾಲ ಪೀಡಿತ ಎಂದು ಘೋಷಣೆ: ರೈತರ ಹೋರಾಟಕ್ಕೆ ಸಿಕ್ಕ ಫಲ

ದೇವರ ಹಿಪ್ಪರಗಿ ತಾಲೂಕು ಬರಗಾಲ ಪೀಡಿತ ಎಂದು ಘೋಷಣೆ: ರೈತರ ಹೋರಾಟಕ್ಕೆ ಸಿಕ್ಕ ಫಲ

ದೇವರ ಹಿಪ್ಪರಗಿ: ದೇವರ ಹಿಪ್ಪರಗಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ, ತಾಲೂಕು ರೈತರ ಪರವಾಗಿ ಸತತ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದ ದೇವರ ಹಿಪ್ಪರಗಿ ತಾಲೂಕು ರೈತ ಸಂಘದ ಅಧ್ಯಕ್ಷ ಸಂಪತ್ ಜಮಾದಾರ ಹಾಗೂ ರೈತ ಮುಖಂಡ ದಿನೇಶಗೌಡ ಪಾಟೀಲ್ ಅವರು ರಾಜ್ಯ ಸರ್ಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಸರ್ಕಾರ ಸೆ.17, 2026ರಂದು ಹೊರಡಿಸಿರುವ ಭೂ ವಾಸ್ತವಾಂಶ ಅಧಿಸೂಚನೆ-3ರಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕನ್ನು ಬರ ಪರಿಸ್ಥಿತಿಯ ಮೌಲ್ಯಮಾಪನಕ್ಕೆ ಒಳಪಡಿಸಿರುವ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿದ್ದು, ಅದರ ಸ್ಥಿತಿಯನ್ನು ಮಧ್ಯಮ (ಒoಜeಡಿಚಿಣe) ಎಂದು ನಮೂದಿಸಲಾಗಿದೆ.
ತಾಲೂಕಿನಲ್ಲಿ ಮಳೆ ಕೊರತೆ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಉಂಟಾದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಬರಗಾಲ ಘೋಷಣೆ ಮಾಡುವಂತೆ ರೈತ ಸಂಘದ ವತಿಯಿಂದ ಹಲವು ಬಾರಿ ಹೋರಾಟ ನಡೆಸಿ, ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಬರ ಘೋಷಣೆಗೆ ಒತ್ತಾಯಿಸಲಾಗಿತ್ತು ಎಂದು ಸಂಪತ್ ಜಮಾದಾರ ಹಾಗೂ ದಿನೇಶಗೌಡ ಪಾಟೀಲ್ ತಿಳಿಸಿದ್ದಾರೆ.
ಸರ್ಕಾರದ ಇಂದಿನ ಕ್ರಮದಿಂದ ದೇವರ ಹಿಪ್ಪರಗಿ ತಾಲೂಕಿನ ರೈತರಿಗೆ ಬರ ಪರಿಹಾರ ಹಾಗೂ ಸರ್ಕಾರದ ನಿಯಮಾನುಸಾರ ದೊರೆಯಬಹುದಾದ ಸೌಲಭ್ಯಗಳ ನಿರೀಕ್ಷೆ ಮೂಡಿದೆ. ಬರದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ, ಅರ್ಹ ರೈತರಿಗೆ ಸೂಕ್ತ ಪರಿಹಾರ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಶೀಘ್ರವಾಗಿ ತಲುಪಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ರೈತರ ಸಮಸ್ಯೆಗೆ ಸ್ಪಂದಿಸಿ ದೇವರ ಹಿಪ್ಪರಗಿ ತಾಲೂಕನ್ನು ಬರ ಪರಿಸ್ಥಿತಿಯಡಿ ಪರಿಗಣಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ರೈತರ ಪರವಾಗಿ ಮುಂದೆಯೂ ಅಗತ್ಯ ಹೋರಾಟ ಹಾಗೂ ಮನವಿಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು” ಎಂದು ಸಂಪತ್ ಜಮಾದಾರ ಹಾಗೂ ದಿನೇಶಗೌಡ ಪಾಟೀಲ್ ತಿಳಿಸಿದ್ದಾರೆ.