
ಕಲಬುರಗಿ,ಸೆ.18-ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಸುಮಾರು 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳಿಗೆ 15 ರಿಂದ 18 ಸಾವಿರ ರೂ.ಗೌರವಧನ ಹೆಚ್ಚಿಸಬೇಕು ಮತ್ತು ಅಡುಗೆ ಸಹಾಯಕರಿಗೆ 12-15 ಸಾವಿರ ವೇತನ ನೀಡಬೇಕು, ಮಹಾನಗರ ಪಾಲಿಕೆಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಖಾಯಂಗೊಳಿಸಬೇಕು ಎಂದು ಕರ್ನಾಟಕ ಸಮತಾ ಸೈನಿಕ ದಳ ಒತ್ತಾಯಿಸಿದೆ.
ಗುರುವಾರ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಕರ್ನಾಟಕ ಸಮತಾ ಸೈನಿಕ ದಳ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ.ಮಾಲೆ, ಜಿಲ್ಲಾ ಅಧ್ಯಕ್ಷ (ಹಂಗಾಮಿ) ವಿಜಯಕುಮಾರ ಉದ್ದಾ, ಜಿಲ್ಲಾ ಕಾನೂನು ಸಲಹೆಗಾರ ಮಹಾದೇವ ನಾಟೀಕಾರ ಅವರು ಮನವಿ ಪತ್ರ ಸಲ್ಲಿಸಿ, ಬಿಸಿಯೂಟ ನೌಕರರಿಗೆ ನೀಡುತ್ತಿರುವ ವೇತನ ಅವರ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಆದ್ದರಿಂದ ಬಿಸಿಯೂಟ ನೌಕರರ ಗೌರವಧನ ಹೆಚ್ಚಿಸಬೇಕು ಮತ್ತು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 935 ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.




























