
ಕುಂದಗೋಳ, ಸೆ ೩: ತಾಲೂಕನ್ನು ಬರಪೀಡಿತ ಎಂದು ಘೋಷಿಸದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದ್ದು, ಕೂಡಲೇ ನ್ಯಾಯ ಒದಗಿಸಿ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಮನವಿ ಸಲ್ಲಿಸಲಾಯಿತು.
ಕುಂದಗೋಳ ತಾಲೂಕನ್ನು ಸರ್ಕಾರಗಳು ಮಲತಾಯಿ ಧೋರಣೆಯಿಂದ ನೋಡುತ್ತಿವೆ. ಬೆಳೆವಿಮೆ ಸಹಿತ ಅನ್ನದಾತರಿಗೆ ಸಿಗಬೇಕಾದ ಸವಲತ್ತುಗಳ ಜತೆಗೆ ಬರ ಘೋಷಣೆಯಲ್ಲಿ ಅನ್ಯಾಯ ಮಾಡಲಾಗುತ್ತಿದ್ದು, ಜನ ಪ್ರತಿನಿಧಿಗಳ ನಿರ್ಲಕ್ಷ÷್ಯ ಎದ್ದು ಕಾಣುತ್ತಿದೆ. ಸಂಶಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ದನ ಕರುಗಳಿಗೆ ಮೇವು, ನೀರಿಲ್ಲ, ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಈ ಬಗ್ಗೆ ನಿರ್ಲಕ್ಷ÷್ಯ ಮಾಡದೇ ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಹೇಳಲಾಗಿದೆ.
ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ, ಅಡಿವೆಪ್ಪ ಹೆಬಸೂರ, ರವಿ ಶಿರಸಂಗಿ, ಅಶೋಕ ಘೋರ್ಪಡೆ, ಮಂಜುನಾಥ ಹಾದಿಮನಿ, ಭಾಯಪ್ಪ ಹೊಸಮನಿ, ಮಾಣಿಕ್ಯ ಚಿಲೂರ, ಲಿಂಗರಾಜ ಕೂಬಿಹಾಳ, ಮನೋಜ ಕಮತರ, ಖಲಂದರ ಹಂಚಿನಾಳ ಮತ್ತಿತರರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.






























