Home ಜಿಲ್ಲೆ ಎಲ್ಲ ವಾರ್ಡ್ಗಳ ಕುಡಿಯುವ ನೀರಿನ ಬೋರ್‌ವೆಲ್‌ಗಳ ಪರಿಶೀಲನೆಗೆ ಆಗ್ರಹ

ಎಲ್ಲ ವಾರ್ಡ್ಗಳ ಕುಡಿಯುವ ನೀರಿನ ಬೋರ್‌ವೆಲ್‌ಗಳ ಪರಿಶೀಲನೆಗೆ ಆಗ್ರಹ

ದೋರನಹಳ್ಳಿ: ಗ್ರಾಮದ ಎಲ್ಲಾ ವಾರ್ಡ್ಗಳಲ್ಲಿರುವ ಕುಡಿಯುವ ನೀರಿನ ಬೋರ್‌ವೆಲ್‌ಗಳನ್ನು ಸಮಗ್ರವಾಗಿ ಪರಿಶೀಲಿಸಿ, ತುಕ್ಕು ಹಿಡಿದಿರುವ ಹಾಗೂ ಹಾನಿಗೊಳಗಾದ ಕಬ್ಬಿಣದ ಬಿಡಿಭಾಗಗಳನ್ನು ಬದಲಾಯಿಸುವಂತೆ ಸಾಮಾಜಿಕ ಯುವ ಹೋರಾಟಗಾರ ಭೀಮು ಸಾವೂರ ಅವರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ವಿವಿಧ ವಾರ್ಡ್ಗಳಲ್ಲಿರುವ ಬೋರ್‌ವೆಲ್‌ಗಳಿಗೆ ಹಲವು ವರ್ಷಗಳ ಹಿಂದೆ ಅಳವಡಿಸಿರುವ ಕಬ್ಬಿಣದ ಪೈಪ್‌ಗಳು, ಚೈನ್‌ಗಳು, ರಾಡ್‌ಗಳು, ಹ್ಯಾಂಡಲ್‌ಗೆ ಜೋಡಿಸಿರುವ ಬಿಡಿಭಾಗಗಳು ಸೇರಿದಂತೆ ವಿವಿಧ ಉಪಕರಣಗಳು ದೀರ್ಘಕಾಲದ ಬಳಕೆಯಿಂದ ತುಕ್ಕು ಹಿಡಿದಿವೆ. ಕೆಲವು ಭಾಗಗಳು ಸವಕಳಿಗೊಂಡಿದ್ದು, ಹಾನಿಗೊಳಗಾದ ಬಿಡಿಭಾಗಗಳು ಬೋರ್‌ವೆಲ್‌ಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ತುಕ್ಕು ಹಿಡಿದ ಉಪಕರಣಗಳಿಂದ ಕುಡಿಯುವ ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಗ್ರಾಮದ ಎಲ್ಲ ವಾರ್ಡ್ಗಳ ಬೋರ್‌ವೆಲ್‌ಗಳ ಸಮಗ್ರ ಸಮೀಕ್ಷೆ ನಡೆಸಿ, ಅವುಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ತುಕ್ಕು ಹಿಡಿದಿರುವ ಮತ್ತು ಹಾನಿಗೊಳಗಾದ ಕಬ್ಬಿಣದ ಪೈಪ್‌ಗಳು, ಚೈನ್‌ಗಳು, ರಾಡ್‌ಗಳು ಹಾಗೂ ಹ್ಯಾಂಡಲ್‌ನ ಬಿಡಿಭಾಗಗಳನ್ನು ಹೊಸ ಉಪಕರಣಗಳಿಂದ ಬದಲಾಯಿಸಬೇಕು. ಕುಡಿಯುವ ನೀರಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅಗತ್ಯ ದುರಸ್ತಿ ಮತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಒದಗಿಸಬೇಕು ಎಂದು ಭೀಮು ಸಾವೂರ ಅವರು ಪಟ್ಟಣ ಪಂಚಾಯಿತಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.