
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೭: ಎನ್‌ಪಿಎಸ್/ಯುಪಿಎಸ್ ಪಿಂಚಣಿ ಪದ್ಧತಿ ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ನೇತೃತ್ವದಲ್ಲಿ ಡಿಸೆಂಬರ್ ೧೨ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಜೈಕುಮಾರ್ ಎಚ್.ಎಸ್. ತಿಳಿಸಿದರು.
ನಗರದ ಸಾಯಿ ಗ್ರ‍್ಯಾಂಡ್ ಹೋಟೆಲ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ನೌಕರರ ಭವಿಷ್ಯದ ಭದ್ರತೆಗೆ ಧಕ್ಕೆ ತರುವ ಪಿಂಚಣಿ ವ್ಯವಸ್ಥೆ ಮುಂದುವರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಪಿಎಸ್-ಯುಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಜಾರಿಗೆ ಆಗ್ರಹ
ಪಿಎಫ್‌ಆರ್‌ಡಿಎ ಕಾಯ್ದೆಯಡಿ ಜಾರಿಯಲ್ಲಿರುವ ಎನ್‌ಪಿಎಸ್/ಯುಪಿಎಸ್ ಪದ್ಧತಿಯಲ್ಲಿ ನೌಕರರು ಹಾಗೂ ಸರ್ಕಾರದ ವಂತಿಗೆ ಹಣವನ್ನು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಲಾಗುತ್ತಿದೆ. ಆದರೆ ನಿವೃತ್ತಿಯ ನಂತರ ನೌಕರರಿಗೆ ಸಮರ್ಪಕ ಪಿಂಚಣಿ ಭದ್ರತೆ ಸಿಗುತ್ತಿಲ್ಲ. ಹೀಗಾಗಿ ಎನ್‌ಪಿಎಸ್/ಯುಪಿಎಸ್ ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ವ್ಯವಸ್ಥೆಯನ್ನೇ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
೨.೮೦ ಲಕ್ಷ ಹುದ್ದೆ ಖಾಲಿ; ಯುವಕರಿಗೆ ಅನ್ಯಾಯ
ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಸುಮಾರು ೨.೮೦ ಲಕ್ಷ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ಹಾಗೂ ಅರೆಕಾಲಿಕ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಇದರಿಂದ ವಿದ್ಯಾವಂತ ಯುವಜನತೆಗೆ ಶಾಶ್ವತ ಉದ್ಯೋಗದ ಅವಕಾಶ ಕಸಿದುಕೊಳ್ಳಲಾಗುತ್ತಿದೆ. ಖಾಲಿ ಹುದ್ದೆಗಳನ್ನು ನಿಯಮಾನುಸಾರ ಶಾಶ್ವತವಾಗಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ
ರಾಜ್ಯ ಸರ್ಕಾರದ ನಗದುರಹಿತ ಆರೋಗ್ಯ ಸಂಜೀವಿನಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಪರಿಣಾಮ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ನೌಕರರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರಲ್ಲೂ ಉದ್ಯೋಗ ಭೀತಿ
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಶಿಕ್ಷಕರಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕ ನಿರ್ಮಾಣವಾಗಿದೆ. ಅವರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅವರು ಹೇಳಿದರು.
ಇದಲ್ಲದೆ, ಕೋವಿಡ್ ಅವಧಿಯ ೧೮ ತಿಂಗಳ ತುಟ್ಟಿಭತ್ಯೆ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು, ಹೊರಗುತ್ತಿಗೆ, ಗುತ್ತಿಗೆ ಹಾಗೂ ದಿನಗೂಲಿ ನೌಕರರಿಗೆ ಅರ್ಹತೆ ಆಧಾರದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿ ಖಾಯಂ ನೇಮಕಾತಿ ಮಾಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಡಿ.೧೨ಕ್ಕೆ ದೆಹಲಿ ಚಲೋ
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಂISಉಇಈ) ನೀಡಿರುವ ಕರೆಯ ಹಿನ್ನೆಲೆಯಲ್ಲಿ ಡಿ.೧೨ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಹಾದೇವಯ್ಯ ಮಠಪತಿ, ಗೌರವಾಧ್ಯಕ್ಷ ಚಂದ್ರಶೇಖರ ಲೆಂಡಿ, ಜಿಲ್ಲಾ ಗೌರವಾಧ್ಯಕ್ಷ ಅಶೋಕ ಇಳಕಲ್, ಜಿಲ್ಲಾಧ್ಯಕ್ಷ ಸುರೇಶ ಜಿ.ಬಿ., ನಿವೃತ್ತ ನೌಕರರ ಒಕ್ಕೂಟದ ಸಂಯೋಜಕ ದಾಕ್ಷಾಯಿಣಿ ಹುಡೇದ್, ಎನ್‌ಇಸಿ ಸದಸ್ಯ ಬಸನಗೌಡ ಎಸ್.ಆರ್., ಮೆಣಸಗಿ, ಎಂ.ಎA. ಪಾಟೀಲ, ಕಾರ್ಯದರ್ಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.































