Home ಜಿಲ್ಲೆ ಕಲಬುರಗಿ ಕಾಳಗಿ , ಚಿತ್ತಾಪುರಕ್ಕೆ ಡಿ.ಸಿ. ಭೇಟಿ: ಸೂರ್ಯನಾರಾಯಣ ದೇವಸ್ಥಾನ,ನಾಗವಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಕಾರ್ಯ ಪರಿಶೀಲನೆ

ಕಾಳಗಿ , ಚಿತ್ತಾಪುರಕ್ಕೆ ಡಿ.ಸಿ. ಭೇಟಿ: ಸೂರ್ಯನಾರಾಯಣ ದೇವಸ್ಥಾನ,ನಾಗವಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಕಾರ್ಯ ಪರಿಶೀಲನೆ

ಕಲಬುರಗಿ,ಜೂ.17: ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಮಂಗಳವಾರ ಜಿಲ್ಲೆಯ ಕಾಳಗಿ ಮತ್ತು ಚಿತ್ತಾಪುರ ತಾಲೂಕಿಗೆ ಭೇಟಿ ನೀಡಿ ಐತಿಹಾಸಿಕ ದೇವಸ್ಥಾನ, ಸ್ಮಾರಕಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾರ್ಯಗಳ ಕುರಿತು ಖುದ್ದಾಗಿ ಪರಿಶೀಲಿಸಿದರು.

ಮೊದಲು ಕಾಳಗಿ ಪಟ್ಟಣದ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿನ ಅನಂತ ಪದ್ಮನಾಭ ಪುಷ್ಕರಣಿ ವೀಕ್ಷಿಸಿದ ಅವರು ನಂತರ ಸುಮಾರು 4.17 ಕೋಟಿ ರೂ. ಕೆ.ಕೆ.ಆರ್.ಡಿ.ಬಿ. ಅನುದಾನದಡಿ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿರುವ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಡಿಸ್ಮೆಂಟಲ್ ಕಾರ್ಯ ಪರಿಶೀಲಿಸಿದರು. ಕಾಲಮಿತಿಯಲ್ಲಿ ದೇವಸ್ಥಾನ ಜೀರ್ಣೋದ್ದಾರ ಕಾರ್ಯ ಮುಗಿಯಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಸ್ಥಳೀಯ ಮುಖಂಡರಾದ ರಾಜೇಶ ಗುತ್ತೇದಾರ ಮತ್ತು ಸಂತೋಷ ಪತಂಗೆ ಅವರು ಡಿ.ಸಿ. ಅವರಿಗೆ ಸ್ಥಳೀಯ ಐತಿಹಾಸಿಕ ದೇವಸ್ಥಾನಗಳ ಮಹತ್ವ ತಿಳಿಸಿದಲ್ಲದೆ ನೀಲಕಂಠೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಪಡಿಸುವುದರ ಜೊತೆಗೆ ಅಲ್ಲಿನ ಒತ್ತುವರಿ ಜಮೀನು ತೆರವು, ರಸ್ತೆ, ಇನ್ನಿತರ ಮೂಲಸೌಕರ್ಯ ಬಲಪಡಿಸುವಂತೆ ಡಿ.ಸಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಾಗಾವಿ ಅಭಿವೃದ್ಧಿಯ ಬ್ಲೂಪ್ರಿಂಟ್ ವೀಕ್ಷಣೆ:ಕಾಳಗಿ ಪ್ರವಾಸದ ನಂತರ ಐತಿಹಾಸಿಕ ನಾಗಾವಿ ನಾಡು ಚಿತ್ತಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿ ತಾಯಿಯ ದರ್ಶನ ಪಡೆದರು. ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಸುಮಾರು 6.25 ಕೋಟಿ ರೂ. ವೆಚ್ಚದಲ್ಲಿ ನಾಗಾವಿ ದೇವಸ್ಥಾನ, ನಂದೇಶ್ವರ ದೇವಸ್ಥಾನ, ಸಂಜೀವಿನಿ ಆಂಜನೇಯ ದೇವಸ್ಥಾನ, ಕಾಲಿ ಮಸೀದಿ ಸೇರಿದಂತೆ ಒಟ್ಟು 13 ಸ್ಮಾರಕಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾರ್ಯದ ಬ್ಲೂಪ್ರಿಂಟ್ ವೀಕ್ಷಿಸಿ ವಾಸ್ತಶಿಲ್ಪಿಗಳಿಂದ ಸಂರಕ್ಷಣಾ ಕಾರ್ಯದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.

ಕಾಮಗಾರಿಗೆ ಈಗಾಗಲೆ ಆಡಳಿತಾತ್ಮಕ ಮಂಜೂರಾತಿ ದೊರೆತಿರುವುದರಿಂದ ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರಿಂದ ದಿನಾಂಕ ಪಡೆದು ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಕರ್ನಾಟಕ ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಅವರಿಗೆ ನಿರ್ದೇಶನ ನೀಡಿದ ಡಿ.ಸಿ. ಅವರು, ನಂತರ ನಂದೇಶ್ವರ ದೇವಸ್ಥಾನ, 60 ಕಂಬಗಳ ದೇವಸ್ಥಾನ, ಕಾಲಿ ಮಸೀದಿಗೂ ಭೇಟಿ ಕೊಟ್ಟರು.
ಕಲಬುರಗಿ ಉಪ ವಿಭಾಗದ ಸಹಾಯಕ ಅಯುಕ್ತೆ ಸಾಹಿತ್ಯ ಆಲದಕಟ್ಟಿ, ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕರ್ನಾಟಕ ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಸಹಾಯಕ ನಿರ್ದೇಶಕ ರಾಜಾರಾಮ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರ್, ಕಾಳಗಿ ತಹಶೀಲ್ದಾರ ಪೃಥ್ವಿರಾಜ, ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.