Home ಮುಖಪುಟ ಸುದ್ದಿ ರಾಜ್ಯದಲ್ಲಿ ೩೨ ಮಂದಿಗೆ ಕೊರೊನಾ ದೃಢ: ಆತಂಕಕ್ಕೆಡೆ

ರಾಜ್ಯದಲ್ಲಿ ೩೨ ಮಂದಿಗೆ ಕೊರೊನಾ ದೃಢ: ಆತಂಕಕ್ಕೆಡೆ

ಬೆಂಗಳೂರು, ಜು.೧೫: ನೆರೆಯ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಈಗ ಕರ್ನಾಟಕದಲ್ಲಿಯೂ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಈಗಾಗಲೇ ೩೨ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.


ಕೆಲ ವರ್ಷಗಳ ಹಿಂದೆ ಜಗತ್ತನ್ನೇ ನಡುಗಿಸಿದ್ದ ವೈರಸ್ ರೂಪಾಂತರದ ಭೀತಿ ಇದೀಗ ಮತ್ತೆ ಮುಂಚೂಣಿಗೆ ಬಂದಿದೆ. ಆಂಧ್ರಪ್ರದೇಶದ ಪರಿಸ್ಥಿತಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ನಡುವೆಯೇ, ಇತ್ತ ಕರ್ನಾಟಕದಲ್ಲೂ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.


ಜುಲೈನಲ್ಲಿ ಪ್ರಕರಣಗಳ ದಿಢೀರ್ ಏರಿಕೆ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿರುವುದು ವರದಿಯಾಗಿದೆ. ಜೂನ್ ತಿಂಗಳ ಅವಧಿಯಲ್ಲಿ ಕೇವಲ ೧೪ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಜುಲೈ ತಿಂಗಳ ಕಳೆದ ಕೇವಲ ಹತ್ತು ದಿನಗಳಲ್ಲೇ ಈ ಸಂಖ್ಯೆ ೩೨ಕ್ಕೆ ತಲುಪಿದೆ. ಒಟ್ಟು ೧೯೩ ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಈ ೩೨ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.


ಆರೋಗ್ಯ ಇಲಾಖೆ ಅಭಯ: ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ ಹೆಗಡೆ, ಆಂಧ್ರಪ್ರದೇಶದ ಕಡಪಾದಲ್ಲಿ ಸಂಭವಿಸಿರುವ ಸಾವುಗಳು ಸದ್ಯಕ್ಕೆ ಶಂಕಿತ ಪ್ರಕರಣಗಳಾಗಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಸದ್ಯ ಪತ್ತೆಯಾಗಿರುವ ಪ್ರಕರಣಗಳು ಅಷ್ಟೊಂದು ಗಂಭೀರ ಸ್ವರೂಪದ್ದಲ್ಲ. ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸಲಾಗುವ ಕಡ್ಡಾಯ ತಪಾಸಣೆಯ ಸಂದರ್ಭದಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದ ಈ ಸೋಂಕು ಪತ್ತೆಯಾಗುತ್ತಿದೆ. ಆರೋಗ್ಯ ಇಲಾಖೆಯು ಪ್ರತಿದಿನದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಯಾರೂ ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.