
ಸಂಜೆವಾಣಿ ವಾರ್ತೆ,
ಬಬಲೇಶ್ವರ, ಸೆ. ೧೫: ಬಬಲೇಶ್ವರದ ಜನತೆ ನೀಡಿರುವ ಪ್ರೀತಿ, ವಿಶ್ವಾಸದ ಋಣ ತೀರಿಸಲು ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಲ್ಲಿನ ಮಠಮಾನ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಸಂಸ್ಥಾನ ಬೃಹನ್ಮಠದಲ್ಲಿ ಭಾನುವಾರ ಸಂಜೆ ನಡೆದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ವಜ್ರ ಮಹೋತ್ಸವ, ತುಲಾಭಾರ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಶ್ರದ್ಧೆ, ಭಕ್ತಿ ಹಾಗೂ ವೈಭವದಿಂದ ಸ್ಥಳೀಯರು ತಿಂಗಳಿನಿAದ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಬಬಲೇಶ್ವರದ ಜನತೆಗೆ ಶ್ರೀಮಠದ ಬಗ್ಗೆ ಅಪಾರ ಭಕ್ತಿ ಇದೆ. ತಮ್ಮ ತಂದೆಯವರ ಕಾಲದಿಂದಲೂ ಬಬಲೇಶ್ವರದ ಜನರು ತಮ್ಮ ಮೇಲೆ ಪ್ರೀತಿ ಹಾಗೂ ಅಭಿಮಾನ ತೋರುತ್ತ ಬಂದಿದ್ದಾರೆ ಎಂದು ಎಂ.ಬಿ. ಪಾಟೀಲ ಸ್ಮರಿಸಿದರು.
ಬಬಲೇಶ್ವರದ ಮಠಕ್ಕೆ ದೊಡ್ಡ ಪರಂಪರೆ ಹಾಗೂ ಹಿನ್ನೆಲೆ ಇದೆ. ಗುರುಪಾದೇಶ್ವರರಿಂದ ಸ್ಥಾಪನೆಯಾದ ಈ ಮಠ ಶಾಂತವೀರ ಶ್ರೀಗಳ ಕಾಲದಲ್ಲಿ ರಾಜ್ಯದಾದ್ಯಂತ ಖ್ಯಾತಿ ಪಡೆದಿತ್ತು. ಹಾನಗಲ್ ಕುಮಾರಸ್ವಾಮಿಗಳ ನೆಲದಿಂದ ಕಿರಿಯ ಶ್ರೀಗಳಾಗಿ ಮಲ್ಲಿಕಾರ್ಜುನ ದೇವರು ಇಲ್ಲಿಗೆ ಆಗಮಿಸಿರುವುದು ಸಂತಸದ ಸಂಗತಿ ಎಂದರು.
ತಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರು ಹಾನಗಲ್ ಶ್ರೀಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪನೆಗೂ ಈ ಬಾಂಧವ್ಯ ಕಾರಣವಾಗಿತ್ತು ಎಂದು ಅವರು ನೆನಪಿಸಿಕೊಂಡರು.
ಮಠದಲ್ಲಿ ನಿರಂತರ ದಾಸೋಹ ನಡೆಸಲು ?೧೦ ಲಕ್ಷ ನೀಡುವುದಾಗಿ ಘೋಷಿಸಿದ ಸಚಿವರು, ಸಮಾಜದ ಎಲ್ಲರೂ ತಮ್ಮ ಕೈಲಾದ ನೆರವು ನೀಡುವ ಮೂಲಕ ದಾಸೋಹದ ಪರಂಪರೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು
ಇದಕ್ಕೂ ಮುನ್ನ ಶಾಂತವೀರ ಶ್ರೀ ವೃತ್ತದಲ್ಲಿ ನಿರ್ಮಿಸಲಾಗಿರುವ ಸುಂದರ ಮಂಟಪದಲ್ಲಿನ ಪೂಜ್ಯ ಶಾಂತವೀರ ಮಹಾಸ್ವಾಮಿಗಳ ಕಂಚಿನ ಪ್ರತಿಮೆ ಹಾಗೂ ಮಠದ ಆವರಣದಲ್ಲಿರುವ ಶಿಲಾ ಮೂರ್ತಿಯನ್ನು ಸಚಿವ ಎಂ.ಬಿ. ಪಾಟೀಲ ಅನಾವರಣಗೊಳಿಸಿದರು.
ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಂದಿರು ತಮ್ಮ ಮಕ್ಕಳನ್ನು ಸನ್ಯಾಸಿಯಾಗಿಸಲು ಸಹಜವಾಗಿ ಒಪ್ಪುವುದಿಲ್ಲ. ಆದರೆ ಇಲ್ಲಿ ಪಟ್ಟಾಧಿಕಾರಗೊಳ್ಳುತ್ತಿರುವ ಮಲ್ಲಿಕಾರ್ಜುನ ದೇವರ ತಾಯಿ ಲಕ್ಷ್ಮೀಬಾಯಿ ಅವರು ತಮ್ಮ ಪುತ್ರನನ್ನು ಸನ್ಯಾಸ ದೀಕ್ಷೆಗೆ ಅರ್ಪಿಸುತ್ತಿರುವುದು ಅನನ್ಯ ಕ್ಷಣವಾಗಿದೆ ಎಂದರು.
ಮಲ್ಲಿಕಾರ್ಜುನ ದೇವರನ್ನು ಬಬಲೇಶ್ವರದ ಮನೆಗಳ ಮೊದಲ ಮಗನೆಂದು ಭಾವಿಸಿ ಭಕ್ತರು ಪೋಷಿಸಿದರೆ, ಮಠವೂ ನಿಮ್ಮನ್ನು ಸಲಹುತ್ತದೆ ಎಂದು ಅವರು ಹೇಳಿದರು.
ಹಾನಗಲ್ ತಾಲೂಕಿನ ಗೊಟಗೋಡಿ ಗ್ರಾಮದ ಮಲ್ಲಿಕಾರ್ಜುನ ದೇವರ ತಾಯಿ ಲಕ್ಷ್ಮೀಬಾಯಿ ಹಾಗೂ ಕುಟುಂಬದವರು ತಮ್ಮ ಪುತ್ರನನ್ನು ಶ್ರೀಮಠಕ್ಕೆ ‘ಪುತ್ರದಾನ’ ಮಾಡಿದ ಭಾವುಕ ಕ್ಷಣಕ್ಕೆ ಅಪಾರ ಸಂಖ್ಯೆಯ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಸಾಕ್ಷಿಯಾದರು.
‘ಬಬಲೇಶ್ವರ ಬೆಳಕು’ ಕೃತಿ ಬಿಡುಗಡೆ
ಸಾಹಿತಿ ಶಂ. ಗು. ಬಿರಾದಾರ ಅವರು ರಚಿಸಿರುವ ಹಾಗೂ ಮರುಮುದ್ರಣಗೊಂಡಿರುವ ‘ಬಬಲೇಶ್ವರ ಬೆಳಕು’ ಕೃತಿಯನ್ನು ಸಚಿವ ಎಂ.ಬಿ. ಪಾಟೀಲ ಹಾಗೂ ವೇದಿಕೆಯಲ್ಲಿದ್ದ ಶ್ರೀಗಳು ಬಿಡುಗಡೆ ಮಾಡಿದರು.
ಬೃಹನ್ಮಠ ಹಾಗೂ ಕ್ಷೇತ್ರಕ್ಕೆ, ನಾಡಿಗೆ ಸಚಿವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶ್ರೀಮಠದ ವತಿಯಿಂದ ಎಂ.ಬಿ. ಪಾಟೀಲ ಅವರಿಗೆ ಗೌರವ ಸಮರ್ಪಿಸಿ ಅಭಿನಂದನಾ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮರೇಗುದ್ದಿಯ ನಿರುಪಾಧೀಶ್ವರ ಸ್ವಾಮೀಜಿ, ಹಾವೇರಿಯ ಸದಾಶಿವ ಶ್ರೀಗಳು, ಹಿರೇಪಡಸಲಗಿಯ ಸಿದ್ಧಲಿಂಗ ಶ್ರೀ, ಚಿಕ್ಕಪಡಸಲಗಿಯ ಅಭಿನವ ಸಿದ್ಧಲಿಂಗ ಶ್ರೀ, ಕಾಖಂಡಕಿಯ ಶಿವಯೋಗಿ ದೇವರು, ಬುರಾಣಪುರದ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ, ಮನಗೂಳಿಯ ಸಂಗನಬಸವ ಶ್ರೀ, ಎರಡೆತ್ತಿನಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ಬೊಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯರು, ಚಿಪ್ಪಲಕಟ್ಟಿಯ ಅಭಿನವ ಸಿದ್ಧಲಿಂಗ ಶ್ರೀಗಳು, ಶಿವಾನಂದ ಶಿವಾಚಾರ್ಯರು, ಬಸವಕಲ್ಯಾಣ ಶ್ರೀ ಹಾಗೂ ದಾನಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ವಿ.ಎನ್. ಬಿರಾದಾರ, ಆರ್.ಜಿ. ಯರನಾಳ, ವಿ.ಎಸ್. ಪಾಟೀಲ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಬಿ.ಎಸ್. ಬಿರಾದಾರ, ಶಾಂತವೀರ ಕೊಕಟನೂರ, ಧರ್ಮರಾಜ ಬೀಳೂರು, ಬೋರಮ್ಮ ಬೀಳೂರು, ಗ್ರಂಥ ದಾಸೋಹಿಗಳಾದ ಸಂತೋಷಕುಮಾರ ಅಡಿಹುಡಿ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಡಾ. ರಾಜಶೇಖರ ಹೊನ್ನುಟಗಿ, ಡಾ. ಸುನೀಲ ಬಿರಾದಾರ ಹಾಗೂ ವಿಕಾಸ ದೇಸಾಯಿ ಅವರನ್ನು ಡಾ. ಮಹಾದೇವ ಶಿವಾಚಾರ್ಯರು ಸನ್ಮಾನಿಸಿದರು.



























