
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೧:ಸಾಮಾನ್ಯ ವ್ಯಕ್ತಿಯೊಬ್ಬ ಅಧಿಕಾರದ ಗದ್ದುಗೆ ಏರಿದಾಗ ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ತರಬಹುದು? ಭ್ರಷ್ಟಾಚಾರ, ಅನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರವನ್ನು ಹೇಗೆ ಬಳಸಬಹುದು? ಎಂಬ ಕುತೂಹಲಕಾರಿ ಕಥಾಹಂದರ ಹೊಂದಿರುವ ‘ಕಾಮನ್ ಮ್ಯಾನ್ ನಾನೇ ಸಿ.ಎಂ.’ ಕನ್ನಡ ಚಲನಚಿತ್ರ ಸೆ. ೨೫ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಸಾಮಾನ್ಯ ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ಪ್ರಜ್ಞಾವಂತ ವಕೀಲನೊಬ್ಬ ಮುಖ್ಯಮಂತ್ರಿಯಾದಾಗ ಜನಪರ ಆಡಳಿತದ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಕಥಾವಸ್ತು. ರಾಜಕೀಯವೆಂದರೆ ಕೇವಲ ಅಧಿಕಾರದ ಚದುರಂಗದಾಟವಲ್ಲ, ಜನರ ಬದುಕನ್ನು ಬದಲಿಸುವ ಜವಾಬ್ದಾರಿ ಎಂಬ ಸಂದೇಶವನ್ನು ಚಿತ್ರ ಸಾರುತ್ತದೆ.
ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಚಿತ್ರವನ್ನು ನಿರ್ದೇಶಿಸಿದ್ದು, ಅವರ ನಿರ್ದೇಶನಕ್ಕೆ ಚಲನಚಿತ್ರ ತಂಡ ಅಭಿನಂದನೆ ಸಲ್ಲಿಸಿದೆ. ಹಲವು ಚಿತ್ರ ನಿರ್ಮಾಪಕರು, ವಿತರಕರು ಹಾಗೂ ನಟ-ನಟಿಯರು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುರಭಿ ಫಿಲ್ಮ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಕಥೆಗಾರ ಹಾಗೂ ನಿರ್ಮಾಪಕರೂ ಆಗಿರುವ ರಂಗಭೂಮಿ ಕಲಾವಿದ ಡಾ. ಎನ್. ನರಸಿಂಹಮೂರ್ತಿ ಅವರು ಮುಖ್ಯಮಂತ್ರಿಯ ಪಾತ್ರದಲ್ಲಿ ವಿಶಿಷ್ಟವಾಗಿ ಅಭಿನಯಿಸಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ ಹಾಗೂ ಜನಸಾಮಾನ್ಯರು ಪ್ರತಿನಿತ್ಯ ಎದುರಿಸುವ ಸಮಸ್ಯೆಗಳ ವಿರುದ್ಧ ಕಾನೂನು ಹೋರಾಟದ ಮೂಲಕ ನ್ಯಾಯ ಒದಗಿಸಬಹುದು. ಆದರೆ, ವ್ಯವಸ್ಥೆಯನ್ನೇ ಬದಲಿಸಿ ಜನರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಲು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಛಲ ಕಥಾನಾಯಕನಲ್ಲಿ ಮೂಡುತ್ತದೆ. ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಆಶಯದೊಂದಿಗೆ ಆತ ರಾಜಕೀಯ ಪ್ರವೇಶಿಸುತ್ತಾನೆ.
ಒಂದೆಡೆ ಭ್ರಷ್ಟಾಚಾರ ಮತ್ತು ಅಧಿಕಾರದ ವ್ಯಾಮೋಹದ ವಿರುದ್ಧ ನಿರಂತರ ಹೋರಾಟ ನಡೆಸುವ ಜನನಾಯಕ, ವಕೀಲ ಕಂಸಾಳೆ ಕುಮಾರ್; ಮತ್ತೊಂದೆಡೆ ಕಳೆದುಕೊಂಡ ಮುಖ್ಯಮಂತ್ರಿ ಸ್ಥಾನವನ್ನು ಮರಳಿ ಪಡೆಯಲು ರಾಜಕೀಯ ತಂತ್ರಗಾರಿಕೆ ರೂಪಿಸುವ ಮಾಜಿ ಮುಖ್ಯಮಂತ್ರಿ. ಇವರ ನಡುವಿನ ಸಂಘರ್ಷವೇ ಚಿತ್ರದ ಕಥೆಗೆ ರೋಚಕ ತಿರುವು ನೀಡುತ್ತದೆ.
ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ ಹೋರಾಟದ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿ, ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆಡಳಿತದಲ್ಲಿ ಬದಲಾವಣೆ ತರಲು ನಾಯಕ ನಡೆಸುವ ಪ್ರಯತ್ನಗಳನ್ನು ಚಿತ್ರ ಅನಾವರಣಗೊಳಿಸುತ್ತದೆ. ‘ಅಧಿಕಾರದ ವಿರುದ್ಧ ಅಧಿಕಾರದ ಕಾಳಗ’ ಎಂಬ ವಿಭಿನ್ನ ಕಥಾಹಂದರ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಚಿತ್ರದಲ್ಲಿ ನಾಯಕಿಯರಾಗಿ ಸೋನಲ್ ಲಾಡ್ವಾ ಹಾಗೂ ಸಬ್ಬಿ ಸೂರಿ ಅಭಿನಯಿಸಿದ್ದು, ಯುವ ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆಯಿದೆ. ವಿಶೇಷವಾಗಿ ಮುಖ್ಯಮಂತ್ರಿಯ ಪಾತ್ರದಲ್ಲಿ ಡಾ. ಎನ್. ನರಸಿಂಹಮೂರ್ತಿ ಅವರ ಅಭಿನಯ ಸಮಸ್ತ ಕನ್ನಡಿಗರ ಗಮನ ಸೆಳೆಯಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಕದಂಬ ಸೈನ್ಯ ಕನ್ನಡ ಸಂಘಟನೆಯ ಗೌರವಾಧ್ಯಕ್ಷರೂ ಆಗಿರುವ ಡಾ. ಎನ್. ನರಸಿಂಹಮೂರ್ತಿ ಅವರ ಅಭಿನಯದ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಸಿ. ಕಾಂಬಳೆ, ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ, ವಿಜಯಪುರ ಜಿಲ್ಲಾಧ್ಯಕ್ಷ ಈರಯ್ಯ ಶಾಂತಯ್ಯ ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಇರ್ಫಾನ್ ಬೀಳಗಿ, ತಾಲೂಕು ಮುಖಂಡ ಆನಂದ ಸಂಗಪ್ಪ ಕಾಳಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.































