Home ಮುಖಪುಟ ಸುದ್ದಿ ಕೋಟ್ಯಾಂತರ ವಂಚನೆ ನೀಲಣ್ಣವರ್ ಗೆ ಸಿಐಡಿ ಗ್ರಿಲ್

ಕೋಟ್ಯಾಂತರ ವಂಚನೆ ನೀಲಣ್ಣವರ್ ಗೆ ಸಿಐಡಿ ಗ್ರಿಲ್

ಬೆಳಗಾವಿ:ಮೇ.೨೦-ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ನಿಯಮ ಉಲ್ಲಂಘಿಸಿ ಹೆಚ್ಚಿನ ಬಡ್ಡಿ ಕೊಡುವುದಾಗಿ ನಂಬಿಸಿ ೩೫ ಸಾವಿರ ಜನರಿಂದ ಕೋಟ್ಯಂತರ ರೂ ಠೇವಣಿ ಸಂಗ್ರಹಿಸಿ ವಂಚನೆ ನಡೆಸಿರುವ ಶಿವಂ ಅಸೋಸಿಯೇಟ್ಸ್ ಪ್ರಕರಣದ ಸಂಬಂಧ ಶಿವಾನಂದ ನೀಲಣ್ಣವರ ಅವರ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರು ದಾಖಲಾಗಿದೆ.


ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ನಿವಾಸಿ ಕೃಷ್ಣ ಅಪ್ಪಣ್ಣ ಅಪರಾಜ ನೀಡಿರುವ ದೂರಿನಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಶಿವಂ ಅಸೋಸಿಯೇಟ್ಸ್ ನೀಡಿದ್ದ ಜಾಹೀರಾತು ನೋಡಿ, ಎಪ್ರಿಲ್ ೪ ರಿಂದ ಮೇ ೮ರ ವರೆಗೆ ಹಂತ ಹಂತವಾಗಿ ಶಿವ ಅಸೋಸಿಯೇಟ್‌ನಲ್ಲಿ ಒಟ್ಟು ೫ ಲಕ್ಷ ರೂಪಾಯಿ ಹಣ ಠೇವಣಿ ಇಟ್ಟಿದ್ದೇನೆ. ಈ ಹಣವನ್ನು ಅವರಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದೇನೆ. ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.


ನಗರ ಪೊಲೀಸರು ಮತ್ತು ಜಿಲ್ಲಾಡಳಿತ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ೩ ದಿನಗಳ ಹಿಂದೆ ಶಿವಂ ಅಸೋಸಿಯಟ್ಸ್ ಸಂಸ್ಥೆ ಮೇಲೆ ದಾಳಿ ಮಾಡಿ, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ವರದಿ ಪ್ರಕಾರ, ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದೆ ಅಂತ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ ಅವರು ಜಂಟಿ ಮಾಧ್ಯಮಗೋಷ್ಟಿಯಲ್ಲಿ ಖಚಿತಪಡಿಸಿದ್ದರು. ಇದರ ಬೆನ್ನಲ್ಲೇ ಕೃಷ್ಣ ಅಪ್ಪಣ್ಣ ಅಪರಾಜ ಅವರು, ಹೆಚ್ಚಿನ ಬಡ್ಡಿ ನೀಡುವುದಾಗಿ ವಂಚಿಸಿರುವ ಬಗ್ಗೆ ದೂರು ದಾಖಲಿಸಿದ್ದಾರೆ.


ಈ ಮೂಲಕ ಠೇವಣಿ ಇಟ್ಟ ೩೫ ಸಾವಿರ ಜನರ ಪೈಕಿ ಮೊದಲ ದೂರು ಶಿವಾನಂದ ನೀಲಣ್ಣವರ ವಿರುದ್ಧ ದಾಖಲಾಗಿದೆ. ಅದೇ ರೀತಿ ಸೋಮವಾರ ನ್ಯಾಯಾಲಯ ನೀಡಿದ ಆದೇಶದಂತೆ ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಶಿವಾನಂದ ನೀಲಣ್ಣವರ ಅವರನ್ನು ಮಂಗಳವಾರ ಬೆಂಗಳೂರಿಗೆ ಕರೆದೊಯ್ದರು.


ಮಾಳ ಮಾರುತಿ ಪೊಲೀಸ್ ಠಾಣೆಯಿಂದ ಹೊರಟ ಸಿಐಡಿ ಅಧಿಕಾರಿಗಳ ತಂಡ, ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಬೆಂಗಳೂರಿನ ಮುಖ್ಯ ಕಚೇರಿಗೆ ಕರೆದುಕೊಂಡು ಹೋದ ವೇಳೆ ಒಂದು ಕಾರಿನಲ್ಲಿ ಆರೋಪಿಯನ್ನು ಕೂರಿಸಲಾಗಿದ್ದರೆ, ಮತ್ತೊಂದು ಕಾರಿನಲ್ಲಿ ಜಪ್ತಿ ಮಾಡಲಾದ ಮಹತ್ವದ ದಾಖಲೆಗಳು, ಕಂಪ್ಯೂಟರ್, ಲ್ಯಾಪ್‌ಟಾಪ್, ಪೆನ್‌ಡ್ರೈವ್ ಹಾಗೂ ಮೊಬೈಲ್ ಫೋನ್ ಸೇರಿ ಮತ್ತಿತರ ಸಾಮಗ್ರಿಗಳಿದ್ದವು.


ಬೆಂಗಳೂರಿಗೆ ಕರೆತಂದು ಸಿಐಡಿ ಕೇಂದ್ರ ಕಚೇರಿಯಲ್ಲಿ ಆರೋಪಿಯ ವಿಚಾರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.