Home ಜಿಲ್ಲೆ ಕಲಬುರಗಿ ಕುಲಪತಿಗಳ ನೇಮಕದಲ್ಲಿ ದಿಟ್ಟತನ ಧೋರಣೆಗೆ ಒತ್ತಾಯ

ಕುಲಪತಿಗಳ ನೇಮಕದಲ್ಲಿ ದಿಟ್ಟತನ ಧೋರಣೆಗೆ ಒತ್ತಾಯ

ಕಲಬುರಗಿ,ನ.27 : ಕಲ್ಯಾಣ ಕರ್ನಾಟಕ ಪ್ರದೇಶದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ, ಘನತೆ ಹೆಚ್ಚಿಸಲು ಸ್ಥಳಿಯತೆ ಮತ್ತು ಅಭಿವೃದ್ಧಿಯ ಮಾನದಂಡದಂತೆ ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿಗಳ ನೇಮಕ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿರುವ ಉದ್ದೇಶ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕದ ಅಸ್ಮಿತೆ ಉಳಿಸಿಕೊಳ್ಳಲು 371ನೇ(ಜೆ) ಕಲಂ ಜಾರಿಗೆ ಬಂದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಕ್ಷೇತ್ರದ ರಚನಾತ್ಮಕ ಪ್ರಗತಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ಪಾತ್ರ ಅತಿ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕದಲ್ಲಿ ಕೇಂದ್ರದ ಶಿಕ್ಷಣ ಸಚಿವರಾದ ಪ್ರಲ್ಹಾದ ಜೋಶಿಯವರು ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಯಲ್ಲಿ ಸ್ಥಳಿಯ ಕರ್ನಾಟಕದವರನ್ನೇ ನೇಮಕ ಮಾಡಬೇಕು ಇದರಿಂದ ಸ್ಥಳಿಯ ಅಸ್ತಿತ್ವಕ್ಕೆ ಮತ್ತು ನಮ್ಮ ಅಸ್ಮಿತೆಯ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಸ್ಪಂದನೆ ಸಿಗುತ್ತದೆ. ಕಲಬುರಗಿ ಸೇರಿದಂತೆ ಕರ್ನಾಟಕದ ಜನಪ್ರತಿನಿಧಿಗಳು ಈ ವಿಷಯಕ್ಕೆ ಗಂಭೀರವಾಗಿ ಪರಿಗಣಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಅವಧಿ ಮುಗಿದು ನೂತನ ಕುಲಪತಿಗಳ ನೇಮಕ ಪ್ರಕ್ರಿಯೆ ನಡೆದಿದೆ. ರಾಜ್ಯ ಸರಕಾರ ವಿಶೇಷವಾಗಿ ರಾಯಚೂರು ಸೇರಿದಂತೆ, ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಕುಲಪತಿಗಳನ್ನಾಗಿ ನೇಮಕ ಮಾಡಿ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಮಿತಿ ಆಗ್ರಹಿಸುತ್ತದೆ. ಈ ಹಿಂದಿನ ಕುಲಪತಿಗಳು ವಿಶ್ವವಿದ್ಯಾಲಯಗಳ ಅನುದಾನ ಆಯೋಗದ(ಯುಜಿಸಿ) ನಿಯಮಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ 75 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಳಲ್ಲಿ ಅವ್ಯವಹಾರ ಮಾಡಿರುವುದರ ಬಗ್ಗೆ ಸಂಘ ಸಂಸ್ಥೆಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳು ಸರಕಾರಕ್ಕೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಹಿಂದಿನ ಕುಲಪತಿಗಳು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿ ನೇಮಕಾತಿ ಆದೇಶಗಳನ್ನು ನೀಡಿರುವುದು ಮೇಲ್ನೋಟಕ್ಕೆ ಅಕ್ರಮವೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೃಷಿ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ಅಕ್ರಮ ನೇಮಕಾತಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದೆ.
ಈ ಎಲ್ಲಾ ಆಯಾಮಗಳನ್ನು ಗಮನಿಸಿ ಸರಕಾರ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಸ್ತಿತ್ವವನ್ನು ಉಳಿಸಲು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹಾಗೂ ವಿಶ್ವವಿದ್ಯಾಲಯದ ಸವಾರ್ಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕೇತರ ಹೊರಗಿನವರಿಗೆ ಕುಲಪತಿ ಸ್ಥಾನಕ್ಕೆ ನೇಮಕ ಮಾಡಬಾರದು. ವಿಶ್ವವಿದ್ಯಾಲಯ ಉಳಿಸಲು ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಪ್ರಾಮಾಣಿಕ ನಿಷ್ಠಾವಂತ ಮತ್ತು ದಿಟ್ಟತನದ ಧೋರಣೆಯ ಕುಲಪತಿಯ ಅವಶ್ಯಕತೆ ಇರುವದರಿಂದ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿಯಲ್ಲಿ ಸ್ಥಳಿಯ ಕಲ್ಯಾಣ ಕರ್ನಾಟಕ ಪ್ರದೇಶದ ಯೋಗ್ಯ ವ್ಯಕ್ತಿಗೆ ಗಣನೆಗೆ ತೆಗೆದುಕೊಂಡು ಕುಲಪತಿ ಸ್ಥಾನಕ್ಕೆ ನೇಮಕ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಸರಕಾರಕ್ಕೆ ಮತ್ತು ರಾಜ್ಯಪಾಲರಿಗೆ ಆಗ್ರಹಿಸಿದೆ.