Home ಮುಖಪುಟ ಸುದ್ದಿ ಸಂಪುಟ ವಿಸ್ತರಣೆ: ದೆಹಲಿಗೆ ತೆರಳಿದ ಸಿಎಂ

ಸಂಪುಟ ವಿಸ್ತರಣೆ: ದೆಹಲಿಗೆ ತೆರಳಿದ ಸಿಎಂ

ಬೆಂಗಳೂರು, ಜು. ೧೫- ಸಚಿವ ಸಂಪುಟ ವಿಸ್ತರಣೆಗೆ ಒತ್ತಡಗಳು ಹೆಚ್ಚಿರುವಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮಧ್ಯಾಹ್ನ ದೆಹಲಿಗೆ ತೆರಳುತ್ತಿದ್ದು, ಸಂಜೆ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಚರ್ಚೆಗೆ ದಿನಾಂಕ ನಿಗದಿ ಮಾಡಲಿದ್ದಾರೆ.


ಸಚಿವ ಸಂಪುಟ ವಿಸ್ತರಣೆಗೆ ಸಚಿವ ಆಕಾಂಕ್ಷಿಗಳಿಂದ ಒತ್ತಡಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ವರಿಷ್ಠರ ಜತೆ ಚರ್ಚೆ ನಡೆಸಬೇಕಿದ್ದು, ಚರ್ಚೆಗೆ ವರಿಷ್ಠರು ಇನ್ನು ಸಮಯ ನಿಗದಿ ಮಾಡಿಲ್ಲ. ಹಾಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದು, ಆ ಸಂದರ್ಭದಲ್ಲಿ ಹೈಕಮಾಂಡ್‌ನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಚರ್ಚೆಗೆ ದಿನಾಂಕ ನಿಗದಿ ಮಾಡುವಂತೆ ಕೋರಲಿದ್ದಾರೆ.


ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರು ಕಳೆದ ಭಾನುವಾರವೇ ವಿದೇಶದಿಂದ ವಾಪಸ್ಸಾಗಿದ್ದರೂ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ರಾಜ್ಯ ನಾಯಕರನ್ನು ಇನ್ನೂ ಕರೆದಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ಚರ್ಚೆ ಮುಂದಕ್ಕೆ ಹೋಗಿದೆ.


ಸಚಿವ ಆಕಾಂಕ್ಷಿ ಶಾಸಕರು ಸಂಪುಟ ವಿಸ್ತರಣೆಯನ್ನು ಆದಷ್ಟು ಶೀಘ್ರವಾಗಿ ಮಾಡುವಂತೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಎಲ್ಲವನ್ನು ಅವರ ಗಮನಕ್ಕೆ ತಂದು ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.