Home ಜಿಲ್ಲೆ ಬಿಎಸ್‍ಎಸ್‍ಕೆ ಕಾರ್ಖಾನೆ ಹರಾಜು ರದ್ದು: ಗುತ್ತಿಗೆಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹ: ಬಿರಾದಾರ

ಬಿಎಸ್‍ಎಸ್‍ಕೆ ಕಾರ್ಖಾನೆ ಹರಾಜು ರದ್ದು: ಗುತ್ತಿಗೆಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹ: ಬಿರಾದಾರ

ಬೀದರ್: ಜಿಲ್ಲೆಯ ರೈತರು ಹಾಗೂ ಕಾರ್ಮಿಕರ ಜೀವನಾಡಿಯಾಗಿರುವ, ಅತ್ಯಂತ ಹಳೆಯ ಬಿಎಸ್‍ಎಸ್‍ಕೆ (ಃSSಏ) ಸಕ್ಕರೆ ಕಾರ್ಖಾನೆಯ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದ್ದು, ಅದನ್ನು ಗುತ್ತಿಗೆ (ಲೀಸ್) ಆಧಾರದ ಮೇಲೆ ಮರುಪ್ರಾರಂಭಿಸಲು ರಾಜ್ಯ ಸರ್ಕಾರ ಭರವಸೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕಳೆದ 5-6 ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಬಿಎಸ್‍ಎಸ್‍ಕೆ ಕಾರ್ಖಾನೆಯ ಮೇಲಿದ್ದ ಸಾಲದ ವಸೂಲಾತಿಗಾಗಿ ಡಿಸಿಸಿ (ಆಅಅ) ಬ್ಯಾಂಕ್ 09-02-2026 ರಂದು ಟೆಂಡರ್ ಮೂಲಕ ಹರಾಜು ಮಾಡಲು ಮುಂದಾಗಿತ್ತು. ಹರಾಜು ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಹಾಗೂ ಬಿಎಸ್‍ಎಸ್‍ಕೆ ಕಾರ್ಮಿಕರ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು ಮತ್ತು ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಬಿಜೆಪಿ ಕೂಡ ಈ ಹೋರಾಟಕ್ಕೆ ಬೆಂಬಲ ನೀಡಿದ್ದರು. ಬ್ಯಾಂಕ್‍ನ ಎಂಡಿ ಮಂಜುಳಾ ಅವರು ಹರಾಜು ಪ್ರಕ್ರಿಯೆ ಕೈಬಿಡಲು ನಿರಾಕರಿಸಿದಾಗ, ಕಾರ್ಖಾನೆ ಉಳಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸಚಿವರ ಮೊರೆ ಹೋದೆವು. ಸೆಪ್ಟೆಂಬರ್ 21 ಹಾಗೂ 22 ರಂದು ಸಕ್ಕರೆ ಸಚಿವರಾದ ರುದ್ರಪ್ಪ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದ್ದು, ಅವರು ಕಾರ್ಖಾನೆಯನ್ನು ಲೀಸ್ ಮೇಲೆ ನೀಡಲು ಸಂಪುಟದಲ್ಲಿ ತೀರ್ಮಾನಿಸುವ ಭರವಸೆ ನೀಡಿದರು. ಸೆಪ್ಟೆಂಬರ್ 23 ರಂದು ಮಾಜಿ ಸಚಿವ ರಾಜಶೇಖರ ಪಾಟೀಲ್, ಎಮ್.ಎಲ್.ಸಿಗಳಾದ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ್, ಸಹಕಾರ ಸಚಿವ ಲಕ್ಷ್ಮಣ್ ಸವದಿ ಅವರ ಬೆಂಬಲದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಯಿತು.
ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಬಿಎಸ್‍ಎಸ್‍ಕೆ ಕಾರ್ಖಾನೆಯನ್ನು ಹರಾಜು ಮಾಡದಂತೆ ಅಪೆಕ್ಸ್ ಬ್ಯಾಂಕ್‍ಗೆ ಸೂಚನೆ ನೀಡಿದ್ದು, ಲೀಸ್ ಮೇಲೆ ನೀಡಲು ಲಿಖಿತ ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿವರಿಸಿದರು.
ಸರ್ಕಾರ ಹಾಗೂ ಸಚಿವರು ನೀಡಿರುವ ಭರವಸೆಯಂತೆ ಮುಂಬರುವ ಹಂಗಾಮಿನಲ್ಲಿ (ಒಂದೆರಡು ತಿಂಗಳಲ್ಲಿ) ಕಾರ್ಖಾನೆಗಳು ಮರು ಪ್ರಾರಂಭಗೊಳ್ಳಬೇಕು. ಒಂದು ವೇಳೆ ನೀಡಿದ ಆಶ್ವಾಸನೆಗಳು ಕೇವಲ ಸುಳ್ಳು ಭರವಸೆಗಳಾಗಿದ್ದಲ್ಲಿ, ಮುಂದಿನ ದಿನಗಳಲ್ಲಿ ಕಾರ್ಮಿಕರು ಮತ್ತು ರೈತರು ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿ.ಎಸ್.ಎಸ್.ಕೆ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ್ ತಮಗಿಕರ್ ಮಾತನಾಡಿ, ಬೀದರ್ ರೈತರು ಹಾಗೂ ಕಾರ್ಮಿಕರ ಜೀವನಾಡಿಯಾಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸುವಂತೆ ಆಗ್ರಹಿಸಿ ರೈತ ಮತ್ತು ಕಾರ್ಮಿಕ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 2016ರಿಂದ ಕಾರ್ಖಾನೆಯ ನಿರ್ವಹಣೆ ಹದಗೆಟ್ಟಿದ್ದು, ಕಾರ್ಮಿಕರಿಗೆ ಬರೋಬ್ಬರಿ 108 ತಿಂಗಳ ವೇತನ ಬಾಕಿ ಉಳಿಸಿಕೊಂಡಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಕಾಲ ಉತ್ತಮ ಸ್ಥಿತಿಯಲ್ಲಿದ್ದ ಕಾರ್ಖಾನೆಯಲ್ಲಿ 2016ರ ಬಳಿಕ ಕಬ್ಬು ನುರಿಸುವ ಪ್ರಮಾಣ ಕಡಿಮೆಯಾಗುತ್ತಾ ಬಂದು, ಸಾಲದ ಹೊರೆ ವಿಪರೀತವಾಗಿ ಹೆಚ್ಚಾಗಿದೆ. ಕಾರ್ಮಿಕರಿಗೆ ಯಾವುದೇ ವೇತನವಾಗಲಿ ಅಥವಾ ಶಾಸನಬದ್ಧ ಪಾವತಿಗಳಾಗಲಿ ದೊರೆತಿಲ್ಲ. ಈವರೆಗೆ 103ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದು, ಸಾಕಷ್ಟು ಜನ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೆ ನಿವೃತ್ತಿ ಹೊಂದಿದ್ದಾರೆ. ಕಾರ್ಮಿಕರಿಗೆ ಒಟ್ಟು 108 ತಿಂಗಳ ವೇತನ ಬಾಕಿ ಇದ್ದು, 106 ಕೋಟಿ 7 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಸೆಪ್ಟೆಂಬರ್ 21, 2022ರಿಂದ ಯಂತ್ರೋಪಕರಣಗಳನ್ನು ಬಳಸದೆ ಇರುವುದರಿಂದ ಶೇ. 60ರಷ್ಟು ಯಂತ್ರಗಳು ಕೆಟ್ಟುಹೋಗುವ ಹಂತವನ್ನು ತಲುಪಿವೆಮ ಎಂದು ಸ್ಪಷ್ಟಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಮಾತನಾಡಿ, ಬೀದರ್ ಜಿಲ್ಲೆಯ ರೈತರು ಬೆಳೆದಿರುವ 30-35 ಲಕ್ಷ ಟನ್ ಕಬ್ಬಿನ ಭವಿಷ್ಯವನ್ನು ಕಾಪಾಡುವ ಜೊತೆಗೆ, ಬರಗಾಲ ಪರಿಹಾರದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಿಧಿಯಡಿ ಹಿಂದಿನ ಸರ್ಕಾರವು 36,000 ಕೋಟಿ ರೂ. ಬೇಡಿಕೆಯಲ್ಲಿ ಕೇವಲ 400 ಕೋಟಿ ರೂ. ನೀಡಿದ್ದು, ರೈತರ ಅನುಕೂಲಕ್ಕಾಗಿ ಬಾಕಿ ಉಳಿದಿರುವ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಇದೇ ವೇಳೆ ಸರ್ಕಾರವನ್ನು ಆಗ್ರಹಿಸಿರುವುದಾಗಿ ಸ್ವಾಮಿ ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಜಮಖಂಡಿ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾವತಿ ಅಣ್ಣೆಪ್ಪನವರ್, ಔರಾದ್ ತಾಲೂಕು ಅಧ್ಯಕ್ಷ ಪ್ರಕಾಶ ಬಾವುಗೆ, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಸುಭಾಷ, ಭಾಲ್ಕಿ ತಾಲೂಕು ಅಧ್ಯಕ್ಷ ಬಾಬುರಾವ್ ಜೊಳದಾಬಕಾ, ಬಿ.ಎಸ್.ಎಸ್.ಕೆ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕಟಗಿ,
ಬೀದರ್ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ್ ಚೆಕ್ಕಿ, ರೈತ ಮುಖಂಡರಾದ ಧೂಳಯ್ಯ ಸ್ವಾಮಿ, ಮಲ್ಲಿಕಾಜೂನ ಭಂಡಾರಿ, ಜಾನಸನ್ ಬಾಬುಲಾಲ, ಶಿವಕುಮಾರ ಸೈಬಣ್ಣ, ಅರ್ಜುನ್ ಲಾಡ್ಕರ್, ಬಸಯ್ಯ ಸ್ವಾಮಿ, ಸಂಗಪ್ಪ ಖೇಣಿರಂಜೋಳ ಪತ್ರಿಕಾಗೋಷ್ಟಿಯಲ್ಲಿದ್ದರು.