Home ಜಿಲ್ಲೆ ಸಂಚಾರ ನಿಯಮ ಪಾಲಿಸಿ; ಜೀವ ರಕ್ಷಣೆಗೆ ಆದ್ಯತೆಜಾಗೃತಿ ಜಾಥಾ ಮೂಲಕ ಸಾರ್ವಜನಿಕರಿಗೆ ಅರಿವು

ಸಂಚಾರ ನಿಯಮ ಪಾಲಿಸಿ; ಜೀವ ರಕ್ಷಣೆಗೆ ಆದ್ಯತೆಜಾಗೃತಿ ಜಾಥಾ ಮೂಲಕ ಸಾರ್ವಜನಿಕರಿಗೆ ಅರಿವು

ಯಾದಗಿರಿ: ರಸ್ತೆ ಅಪಘಾತಗಳನ್ನು ನಿಯಂತ್ರಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾದರೆ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮರುಳಾಸಿದ್ದಾರಾಧ್ಯ ಎಚ್.ಜೆ. ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಪೆÇಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ವಿವಿಧ ವಾಹನ ಚಾಲಕರ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಂಚಾರ ನಿಯಮಗಳ ಪಾಲನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಚಿರಂಜೀವಿ ಪ್ರೌಢಶಾಲೆಯಿಂದ ಆರಂಭವಾದ ಜಾಥಾವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸುಭಾಷ್ ಚೌಕ್‍ವರೆಗೆ ನಡೆಯಿತು. ಜಾಥಾದಲ್ಲಿ ನ್ಯಾಯವಾದಿಗಳು, ಪೆÇಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸಿದರು.

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಸಣ್ಣ ಪ್ರಮಾಣದ ನಿಯಮ ಉಲ್ಲಂಘನೆಯೂ ಕೆಲವೊಮ್ಮೆ ಜೀವಕ್ಕೆ ಅಪಾಯ ತಂದೊಡ್ಡಬಹುದು. ಹೀಗಾಗಿ ಚಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ವಾಹನ ಚಲಾಯಿಸಬೇಕು. ಸಾರ್ವಜನಿಕರೂ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗೆ ಸಹಕರಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಮಾತನಾಡಿ, ಸುರಕ್ಷಿತ ಸಂಚಾರ ವ್ಯವಸ್ಥೆ ನಿರ್ಮಿಸುವುದು ಪೆÇಲೀಸ್ ಇಲಾಖೆಯೊಂದರ ಜವಾಬ್ದಾರಿಯಲ್ಲ. ವಾಹನ ಸವಾರರು, ಪಾದಚಾರಿಗಳು ಹಾಗೂ ಸಾರ್ವಜನಿಕರು ನಿಯಮಗಳನ್ನು ಪಾಲಿಸಿದಾಗ ಮಾತ್ರ ರಸ್ತೆ ಸುರಕ್ಷತೆ ಸಾಧ್ಯವಾಗಲಿದೆ ಎಂದರು.

ಜಾಥಾದಲ್ಲಿ ಹೆಲ್ಮೆಟ್ ಧರಿಸುವುದು, ಸೀಟ್‍ಬೆಲ್ಟ್ ಬಳಸುವುದು, ನಿಗದಿತ ವೇಗದಲ್ಲಿ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಸದಿರುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸದಿರುವುದು, ಸಂಚಾರ ಸಂಕೇತಗಳನ್ನು ಪಾಲಿಸುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಯಿತು.

ವಾಹನ ಚಾಲಕರು ತಮ್ಮೊಂದಿಗೆ ರಸ್ತೆಯಲ್ಲಿ ಸಂಚರಿಸುವ ಇತರರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಯುವಜನರು ಹಾಗೂ ವಿದ್ಯಾರ್ಥಿಗಳು ಸಂಚಾರ ನಿಯಮಗಳ ಬಗ್ಗೆ ಜಾಗೃತರಾಗುವ ಮೂಲಕ ಕುಟುಂಬ ಮತ್ತು ಸಮಾಜದಲ್ಲಿಯೂ ರಸ್ತೆ ಸುರಕ್ಷತೆಯ ಸಂದೇಶವನ್ನು ಹರಡಬೇಕು ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಾ. ಮರಿಯಪ್ಪ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು, ನ್ಯಾಯವಾದಿಗಳು, ಪೆÇಲೀಸ್ ಸಿಬ್ಬಂದಿ, ಆಟೋ ಚಾಲಕರ ಸಂಘದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.