
ಬೆಂಗಳೂರು: ಮೇ.೨೦-ನಗರದ ಬೌರಿಂಗ್ ಅಸ್ಪತ್ರೆ ಆವರಣದಲ್ಲಿ ಸಂಭವಿಸಿದ್ದ ಕಾಂಪೌಂಡ್ ಗೋಡೆ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ರಚಿಸಿದ್ದ ಪರಿಶೀಲನಾ ತಂಡ ತನ್ನ ವರದಿಯನ್ನು ಸಲ್ಲಿಸಿದ್ದು, ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಟ್ಟಡ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿಯೇ ಪ್ರಮುಖ ಕಾರಣ ಎಂದು ಬಹಿರಂಗಪಡಿಸಿದೆ.
೨೦೨೬ರ ಏಪ್ರಿಲ್ ೨೯ರಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ವೇಳೆ ಆಸ್ಪತ್ರೆ ಆವರಣದ ಗೋಡೆ ಕುಸಿದು ೭ ಮಂದಿ ಸಾವನ್ನಪ್ಪಿ, ಮತ್ತೂ ೭ ಜನರು ಗಾಯಗೊಂಡಿದ್ದರು. ಪ್ರಕರಣದ ಗಂಭೀರತೆಯನ್ನು ಗಮನಿಸಿ ಮೇ ೧೪ರಂದು ಮುಖ್ಯ ಕಾರ್ಯದರ್ಶಿಗಳು ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.
ತನಿಖಾ ವರದಿಯಲ್ಲಿ, ಆಸ್ಪತ್ರೆ ಸಮೀಪ ಸುಮಾರು ೨೨ ಸಾವಿರ ಚದರ ಅಡಿ ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಹಾಗೂ ಅವೈಜ್ಞಾನಿಕವಾಗಿ ಸಂಗ್ರಹಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಈ ತ್ಯಾಜ್ಯ ಮತ್ತು ಮಣ್ಣಿನ ಒತ್ತಡದಿಂದ ಗೋಡೆಯ ಮೇಲೆ ಸುಮಾರು ೩೩೦೫ Ib/ಜಿಣ ಪ್ರಮಾಣದ ಹೆಚ್ಚುವರಿ ಒತ್ತಡ ಉಂಟಾಗಿ ಗೋಡೆ ಕುಸಿದಿದೆ ಎಂದು ತಾಂತ್ರಿಕ ವರದಿ ತಿಳಿಸಿದೆ.
ಮಳೆನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದೂ ದುರಂತವನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಒಳಚರಂಡಿ ಹಾಗೂ ಮಳೆನೀರು ನಿರ್ವಹಣಾ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಂSಖ ಖಿಡಿಚಿಜeಡಿs ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ತನಿಖಾ ತಂಡ ಶಿಫಾರಸು ಮಾಡಿದೆ. ಜೊತೆಗೆ ಆರೋಗ್ಯ ಇಲಾಖೆಯ ನಾಲ್ವರು ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸಹಾಯಕ ಇಂಜಿನಿಯರ್ ಸೋಮರಾಜು, ಇಇ ಮಹೇಶ್ ಕುಮಾರ್, ಇಇ ತಿಮ್ಮಪ್ಪ ಮತ್ತು ಮುಖ್ಯ ಇಂಜಿನಿಯರ್ ಉದಯಶಂಕರ್ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.
ಇದೇ ವೇಳೆ, ಕುಸಿದಿರುವ ಸುಮಾರು ೨೦೦ ಮೀಟರ್ ಉದ್ದದ ಗೋಡೆಯನ್ನು ವೈಜ್ಞಾನಿಕ ವಿಧಾನದಲ್ಲಿ ತಕ್ಷಣ ಮರುನಿರ್ಮಿಸಲು ಆದೇಶಿಸಲಾಗಿದೆ. ಜೊತೆಗೆ ಜಿಬಿಎ ವತಿಯಿಂದ ಸಂಬಂಧಿತ ಸಿಸಿ ಹಾಗೂ ಓಸಿ. ಸರ್ಟಿಫಿಕೇಟ್ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಆಸ್ಪತ್ರೆ ಆವರಣದಲ್ಲಿರುವ ಕಟ್ಟಡ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
























