
ರಾಮನಗರ,ಸೆ.೦೮:ಸಚಿವ ಎಚ್.ಸಿ.ಬಾಲಕೃಷ್ಣ ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಜತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ಇದರಿಂದ ಅಪಾರ ಜನಬೆಂಬಲ ದೊರೆತಿದ್ದು,ಇದನ್ನು ಸಹಿಸದ ಮಾಜಿ ಶಾಸಕ ಎ.ಮಂಜುನಾಥ್ ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೂಟಗಲ್-ಬಿಡದಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಗೌಡ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಎಚ್.ಸಿ.ಬಾಲಕೃಷ್ಣ ಅವರನ್ನು ಟೀಕಿಸುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ.ಇದನ್ನು ಕೂಡಲೇ ನಿಲ್ಲಿಸದಿದ್ದರೆ ಅವರದೇ ಧಾಟಿಯಲ್ಲಿ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿಗಳನ್ನು ಮಾಡುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ, ಟೀಕೆಗಳು ಸಭ್ಯತೆಯ ಮಿತಿ ಮೀರಬಾರದು. ವಿಷಯಾಧಾರಿತವಾಗಿ ಟೀಕೆಗಳನ್ನು ಮಾಡಲಿ.ಒಂದು ವೇಳೆ ನಮ್ಮ ನಾಯಕರು ಭ್ರಷ್ಟಾಚಾರ ಮಾಡಿದ್ದರೆ,ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಲಿ. ಅವರು ತನಿಖೆ ಮಾಡಿ ತಕ್ಕ ಕ್ರಮ ಕೈಗೊಳ್ಳುತ್ತಾರೆ. ಅದನ್ನು ಬಿಟ್ಟು ಸಭ್ಯತೆಯ ಎಲ್ಲೆ ಮೀರಿ ಕೀಳು ಮಟ್ಟದ ಟೀಕೆಗಳನ್ನು ಮಾಡಬಾರದು ಎಂದರು.
ಅವರಂತೆ ನಾವೂ ಕೂಡ ಏಕವಚನ ಬಳಸಬಹುದು.ಆದರೆ,ಅದು ನಮ್ಮ ಸಂಸ್ಕೃತಿ ಅಲ್ಲ. ಅವರ ವಯಸ್ಸಿಗೆ,ಅವರ ಸ್ಥಾನಕ್ಕೆ ಗೌರವ ನೀಡಬೇಕು. ಇದನ್ನು ಎ.ಮಂಜುನಾಥ್ ಅರಿತುಕೊಳ್ಳಬೇಕು.ಇನ್ನು ಮುಂದೆಯೂ ಅವರು ನಾಲಿಗೆ ಹರಿಬಿಟ್ಟರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಹೇಳಿದರು.
ಎ.ಮಂಜುನಾಥ್ ಶಾಸಕರಾಗಿದ್ದ ಅವಧಿಯಲ್ಲಿ ಯಾವ ಗ್ರಾಮಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಅವಕಾಶ ಸಿಕ್ಕಾಗ ಜನಸೇವೆ ಮಾಡಿದ್ದರೆ ಜನ ಅವರನ್ನೇಕೆ ಸೋಲಿಸುತ್ತಿದ್ದರು. ೫೦ ಸಾವಿರ ಮತಗಳಿಂದ ಸೋತಿದ್ದ ಬಾಲಕೃಷ್ಣ ಏಕೆ ಗೆಲುವು ಸಾಧಿಸುತ್ತಿದ್ದರು ಎಂದು ಪ್ರಶ್ನಿಸಿದ ಗಂಗಾಧರ್ ಜನರ ವಿಶ್ವಾಸ ಕಳೆದುಕೊಂಡಿದ್ದರಿಂದಲೇ ಅವರು ಸೋತರು ಎಂದರು.
ಮಾಧ್ಯಮಗಳ ಮುಂದೆ ಕುಳಿತು ದಮ್ಮು, ತಾಕತ್ತು ಎಂಬ ಪದಗಳನ್ನು ಬಳಸಿ, ಕೂಗಾಡಿದರೆ, ಕಿರುಚಾಡಿದ ಮಾತ್ರಕ್ಕೆ ಯಾರೂ ಹೆದರುವುದಿಲ್ಲ. ದಮ್ಮು, ತಾಕತ್ತು ಎಲ್ಲರಲ್ಲೂ ಇರುತ್ತದೆ. ಸಮಯ ಸಂದರ್ಭ ಬಂದಾಗ ತೋರಿಸುತ್ತೇವೆ. ಬಾಲಣ್ಣ ಅವರ ಬೆಂಬಲಿಗರು ನಾವಿದ್ದೇವೆ. ನಮಗೂ ಶಕ್ತಿ ಇದೆ ಎಂಬುದನ್ನು ಕಾಲ ಬಂದಾಗ ತೋರಿಸುತ್ತೇವೆ ಎಂದು ತಿಳಿಸಿದರು.ಎಚ್.ಸಿ.ಬಾಲಕೃಷ್ಣ, ಎಚ್.ಎನ್.ಅಶೋಕ್ ಅವರು ಯಾವುದೇ ಹುದ್ದೆಯನ್ನು ಖರೀದಿಸಿಲ್ಲ. ಇಲ್ಲವೇ ನಾಮಿನಿ ಸದಸ್ಯರೂ ಆಗಿಲ್ಲ. ಬದಲಾಗಿ ಚುನಾವಣೆಗೆ ನಿಂತು ಆಯ್ಕೆಯಾಗಿ ಬಂದಿದ್ದಾರೆ. ಸುಮ್ಮನೆ ಟೀಕಿಸುವುದನ್ನು ಬಿಟ್ಟು ಅವರ ವಿರುದ್ಧ ನಿಂತು ಗೆಲ್ಲಲಿ, ಇಲ್ಲವೇ ಬೆಂಬಲಿಗರನ್ನು ನಿಲ್ಲಿಸಿ ಗೆಲ್ಲಿಸಲಿ ಎಂದು ಗಂಗಾಧರ್ ಸವಾಲು ಹಾಕಿದರು.
ಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೀಶ್, ಗ್ರಾಪಂ ಮಾಜಿ ಸದಸ್ಯ ರಾದ ಕೂಟಗಲ್ ನಟರಾಜು, ಯರೇಹಳ್ಳಿ ನಂದೀಶ್, ತಡಿಕವಾಗಿಲು ನಾಗಣ್ಣ, ಮುಖಂಡ ರಾದ ಚನ್ನೇನಹಳ್ಳಿ ಶಂಭುಗೌಡ, ಕೂನಮುದ್ದನಹಳ್ಳಿ ವೇದರಾಜು, ಮುನಿಯಪ್ಪ, ರವಿ ಇದ್ದರು.
































