
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಂಗ್ರಹಿಸಿದ ಬಿಸ್ಲೇರಿ ಕುಡಿಯುವ ನೀರಿನ ಮಾದರಿಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂಬ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ವರದಿಯನ್ನು ಬಿಸ್ಲೇರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಪ್ರಶ್ನಿಸಿದೆ.
ಈ ವರದಿಯನ್ನು ಮರುಪರಿಶೀಲಿಸುವಂತೆ ಕಂಪನಿಯು ಎಫ್ಎಸ್ಎಸ್ಎಐಗೆ ಮನವಿ ಸಲ್ಲಿಸಿದ್ದು, ಎರಡು ಪ್ರತ್ಯೇಕ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ನೀರು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿದೆ ಎಂಬ ವರದಿ ಬಂದಿದೆ ಎಂದು ತಿಳಿಸಿದೆ.
ಎಫ್ಎಸ್ಎಸ್ಎಐ ಸೂಚನೆಯಂತೆ ವಿವಾದಿತ ಬ್ಯಾಚ್ನ ನೀರಿನ ಬಾಟಲಿಗಳನ್ನು ಈಗಾಗಲೇ ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಬಿಸ್ಲೇರಿ ಸ್ಪಷ್ಟಪಡಿಸಿದೆ. ಜಲ್ಪೈಗುರಿ ಜಿಲ್ಲೆಯ ಟೆಲಿಪಾರಾದಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಾದ Pಃ೨೦೧ ಬ್ಯಾಚ್ನ ಮಾದರಿಯನ್ನು ಆಗಸ್ಟ್ ೧೨, ೨೦೨೬ರಂದು ಮಾರಾಟ ಮಾಡದಂತೆ ಪ್ರಾಧಿಕಾರ ಸೂಚಿಸಿತ್ತು. ಪ್ರಾಥಮಿಕ ಪ್ರಯೋಗಾಲಯ ಹಾಗೂ ಮೇಲ್ಮನವಿ ಪ್ರಯೋಗಾಲಯಗಳೆರಡರಲ್ಲೂ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಆದರೆ, ಅದೇ ಬ್ಯಾಚ್ನ ಮಾದರಿಗಳನ್ನು ಕಂಪನಿಯು ಎಫ್ಎಸ್ಎಸ್ಎಐ ಮಾನ್ಯತೆ ಪಡೆದ ಎರಡು ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ ಎಂಬ ವರದಿ ಬಂದಿದೆ ಎಂದು ತಿಳಿಸಿದೆ.
ಎರಡೂ ಪರೀಕ್ಷೆಗಳ ಫಲಿತಾಂಶಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಮಾದರಿ ಸಂಗ್ರಹ ಪ್ರಕ್ರಿಯೆ, ಪರೀಕ್ಷಾ ವಿಧಾನ ಹಾಗೂ ಪ್ರಯೋಗಾಲಯಗಳ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಬಿಸ್ಲೇರಿ ಮನವಿ ಮಾಡಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಲು ಆಹಾರ ಸುರಕ್ಷತಾ ಪ್ರಾಧಿಕಾರದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಕಂಪನಿ ಹೇಳಿದೆ.
ಇದೇ ವೇಳೆ, ಗೋವಾದಲ್ಲಿನ ಬಿಸ್ಲೇರಿ ಉತ್ಪಾದನಾ ಘಟಕದಿಂದ ಸಂಗ್ರಹಿಸಿದ ಮತ್ತೊಂದು ನೀರಿನ ಮಾದರಿಯಲ್ಲೂ ನಿಗದಿತ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ ಈ ಹಿಂದೆ ಕಂಪನಿ ವಿರುದ್ಧ ವಿಚಾರಣೆಗೆ ಅನುಮತಿ ನೀಡಿತ್ತು. ದೇಶಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಕಾರ್ಯವನ್ನೂ ಪ್ರಾಧಿಕಾರ ತೀವ್ರಗೊಳಿಸಿದೆ.























