
ಚನ್ನಮ್ಮನ ಕಿತ್ತೂರು,ಜೂ೧೨: ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ಸಾಗರ ಗ್ರಾಮದ ತವನಪ್ಪ ಬೆಟಗೇರಿ ಮನೆಯಿಂದ ನಿಂಗಪ್ಪ ಬಡಸದ ಮನೆವರೆಗೆ ಅಂದಾಜು ವೆಚ್ಚ ೩೯ ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಭೂಮಿ ಪೂಜೆ ನೇರವೇರಿಸಿದರು.
ಇದರ ಜೊತೆಗೆ ಇದೇ ಗ್ರಾಮದ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೂ ಚಾಲನೆ ನೀಡಲಾಯಿತು.
ನಂತರ ಅವರು ಮಾತನಾಡಿ ಈ ಕಾಮಗಾರಿ ಕಳಪೆಯಾಗದಂತೆ ಗುತ್ತಿಗೆದಾರರು ನೋಡಿಕೊಳ್ಳಬೇಕು. ನಮ್ಮ ಸರ್ಕಾರ ಮೂರು ವರ್ಷ ಆಡಳಿತ ಪೂರೈಸಿದ್ದು ಉತ್ತಮ ಆಡಳಿತ ನೀಡಿದೆ. ನೂತನ ಮುಖ್ಯಮಂತ್ರಿ ಡಿಕೆಶಿವಕುಮಾರ ಅವರ ನೇತೃತ್ವದ ಸರ್ಕಾರ ರಾಜ್ಯದ ಅಭಿವೃದ್ಧಿ ಕಲ್ಪಿಸುವ ಮಹತ್ವ ನಿರ್ಧಾರ ಕೈಗೊಂಡಿದೆ. ಬಡವ ಶ್ರೀಮಂತ ಎನ್ನದೆ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳು ಮನೆಬಾಗಿಲಿಗೆ ತಲುಪಿಸುವಂತೆ ದಿಟ್ಟ ನಿರ್ಧಾರ ಕೈಗೊಂಡಿದ್ದು. ಅಧಿಕಾರ ಸ್ವೀಕರಿಸಿದ ದಿನವೇ ರಾಜ್ಯದ ಎಲ್ಲ ಮಕ್ಕಳಿಗೂ ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ಮಾಡಿರುವುದು ಶ್ಲಾಘನೀಯ ಎಂದರು.
ಬಹುತೇಕ ಕ್ಷೇತ್ರದ ಹಲವು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದ್ದು ಅಧಿಕಾರಿಗಳು ನಮ್ಮ ಜೊತೆ ಕೈಜೊಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಇನ್ನುಳಿದ ಅಭಿವೃದ್ದಿ ಕೆಲಸಗಳನ್ನು ಮಾಡಲು ನಾನು ಸದಾ ಬದ್ಧನಿದ್ದೇನೆಂದರು.
ಈ ವೇಳೆ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮಾಜಿ ತಾಪಂ ಸದಸ್ಯ ಮುದಕಪ್ಪ ಮರಡಿ, ಗುತ್ತಿಗೆದಾರ ಶಿವಯೋಗಿ ದೊಡಮನಿ, ಮಾಜಿ ಗ್ರಾಪಂ ಅಧ್ಯಕ್ಷ ಭೀಷ್ಟಪ್ಪ ಶಿಂದೆ, ಸುನೀಲ್ ಘೀವಾರಿ, ಅಶಪಾಕ ಹವಾಲ್ದಾರ, ದೇವಗಾಂವ ಚಂದ್ರಗೌಡ ಪಾಟೀಲ, ಬಸವರಾಜ ಎಮ್ಮಿ, ಶಿವನಪ್ಪ ಬನಜಿಗ, ಜಿಪಂ, ತಾಪಂ ಇಂಜಿನೀಯರ್ ಆರ್.ಆರ್.ಬಡಿಗೆರ, ನೆರೇಗಲ್ಲ ಸೇರಿದಂತೆ ಗ್ರಾಮಸ್ಥರಿದ್ದರು.


























