Home ಜಿಲ್ಲೆ ಗ್ರಾಮೀಣ ಮಕ್ಕಳ ಸವಾರ್ಂಗೀಣ ವಿಕಾಸಕ್ಕೆ 25 ಶಾಲೆಗಳ ದತ್ತು ಸ್ವೀಕಾರಕ್ಕೆ ಭಾರತೀಯ ಸುರಾಜ್ಯ ಸಂಸ್ಥೆ ಸಂಕಲ್ಪ

ಗ್ರಾಮೀಣ ಮಕ್ಕಳ ಸವಾರ್ಂಗೀಣ ವಿಕಾಸಕ್ಕೆ 25 ಶಾಲೆಗಳ ದತ್ತು ಸ್ವೀಕಾರಕ್ಕೆ ಭಾರತೀಯ ಸುರಾಜ್ಯ ಸಂಸ್ಥೆ ಸಂಕಲ್ಪ

ವಿಜಯಪುರ, ನ. 27:ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ, ಸಂಸ್ಕಾರ, ಆಧ್ಯಾತ್ಮಿಕ ಚಿಂತನೆ ಹಾಗೂ ರಾಷ್ಟ್ರಪ್ರೇಮದ ಅರಿವು ಮೂಡಿಸುವ ಉದ್ದೇಶದಿಂದ ಪರಮಪೂಜ್ಯ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿದ ಭಾರತೀಯ ಸುರಾಜ್ಯ ಸಂಸ್ಥೆ ಮಹತ್ವದ ಶೈಕ್ಷಣಿಕ ಉಪಕ್ರಮಕ್ಕೆ ಮುಂದಾಗಿದೆ. ವಿಜಯಪುರ ಜಿಲ್ಲೆಯ 25 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ದತ್ತು ಪಡೆದು, ಮೂರು ವರ್ಷಗಳ ಅವಧಿಯಲ್ಲಿ ಅವುಗಳ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಂಸ್ಥೆ ಯೋಜನೆ ರೂಪಿಸಿದೆ ಎಂದು ಭಾರತೀಯ ಸ್ವರಾಜ್ಯ ಸಂಸ್ಥೆಯ ಸದಸ್ಯರಾದ ಕುಮಾರ ಎಸ್. ನಾನಾವಟೆ, ಸಂಸ್ಥೆಯ ಖಜಾಂಚಿ ಪ್ರಕಾಶ್ ಪತ್ತಾರ ಹಾಗೂ ರಾಮರಾಜ್ಯ ಕಲಾವಿದರ ಅಧ್ಯಕ್ಷ ಶ್ರೀಕೃಷ್ಣ ಸಂಪಗಾವಕರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳನ್ನು ಕೇವಲ ಅಂಕ ಗಳಿಸುವ ವಿದ್ಯಾರ್ಥಿಗಳನ್ನಾಗಿ ರೂಪಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ; ಅವರನ್ನು ನೀತಿವಂತ, ಗುಣವಂತ, ವಿದ್ಯಾವಂತ ಹಾಗೂ ಆರೋಗ್ಯವಂತ ನಾಗರಿಕರನ್ನಾಗಿ ರೂಪಿಸಬೇಕು ಎಂಬ ಸದ್ಗುರುಗಳ ದೂರದೃಷ್ಟಿಯ ಆಶಯದಂತೆ ಸಂಸ್ಥೆ ಹಲವು ವರ್ಷಗಳಿಂದ ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.

24 ವರ್ಷಗಳಿಂದ ಉಚಿತ ಬೇಸಿಗೆ ಶಿಬಿರ:

ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದ ಶಾಂತಿಕುಟೀರ ಆಶ್ರಮದಲ್ಲಿ ಗ್ರಾಮೀಣ ಮಕ್ಕಳಿಗಾಗಿ ಪ್ರತಿವರ್ಷ ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಶಿಬಿರ ಆಯೋಜಿಸಲಾಗುತ್ತಿದೆ. ಕಳೆದ 24 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಶಿಬಿರದ ಮೂಲಕ ಈವರೆಗೆ 12 ಸಾವಿರಕ್ಕೂ ಹೆಚ್ಚು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.
ಶಿಬಿರದಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್ ಹಾಗೂ ಇಂಗ್ಲಿಷ್ ವ್ಯಾಕರಣ ಸೇರಿದಂತೆ ವಿವಿಧ ವಿಷಯಗಳನ್ನು ಸರಳ ಬೋಧನಾ ವಿಧಾನಗಳ ಮೂಲಕ ಕಲಿಸಲಾಗುತ್ತದೆ. ವಿಶೇಷವಾಗಿ 30 ದಿನಗಳ ಕಾಲ ನಿರಂತರವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ 2ರಿಂದ 99ರವರೆಗಿನ ಮಗ್ಗಿಗಳನ್ನು ಸುಲಭವಾಗಿ ಕಲಿಯುವ ತರಬೇತಿ ನೀಡಲಾಗುತ್ತದೆ.
ಇದರೊಂದಿಗೆ ಧ್ಯಾನ, ಪ್ರಾರ್ಥನೆ, ನಾಮಸ್ಮರಣೆ, ಏಕಾಗ್ರತೆಯ ಅಭ್ಯಾಸ, ಆಟೋಟ, ವ್ಯಕ್ತಿತ್ವ ವಿಕಸನ ಹಾಗೂ ಭಾರತೀಯ ಸಂಸ್ಕøತಿ ಮತ್ತು ಪರಂಪರೆಯ ಪರಿಚಯ ಮಾಡಿಕೊಡಲಾಗುತ್ತದೆ. ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲಾಗುತ್ತದೆ. ಶಿಕ್ಷಣ ತಜ್ಞರಿಂದ ಪಾಲಕರ ಸಭೆ ನಡೆಸಿ ಮಕ್ಕಳ ಕಲಿಕೆಯಲ್ಲಿ ಪೆÇೀಷಕರ ಪಾತ್ರದ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ.
ರಾಜ್ಯದ ವಿವಿಧ ಭಾಗಗಳ ಶಿಕ್ಷಣ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಮಾರ್ಗದರ್ಶನ ನೀಡುತ್ತಾರೆ. ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಅನುಭವಿ ಶಿಕ್ಷಕರು ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನೋಟ್ಬುಕ್, ಶಾಲಾ ಬ್ಯಾಗ್, ಫೈಲ್, ಪೆನ್, ಪೆನ್ಸಿಲ್, ಕಂಪಾಸ್ ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

2002ರಲ್ಲಿ ಆರಂಭಿಸಿದ್ದ ಶಾಲಾ ದತ್ತು ಯೋಜನೆಗೆ ಮರುಚಾಲನೆ:

ಸದ್ಗುರು ಶ್ರೀ ಗಣಪತರಾವ ಮಹಾರಾಜರು 2002ರಲ್ಲಿ ಕನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲಾ ದತ್ತು ಯೋಜನೆಗೆ ಚಾಲನೆ ನೀಡಿದ್ದರು. ಇದೀಗ ಸಂಸ್ಥೆಯ ಶೈಕ್ಷಣಿಕ ಸೇವೆಯ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಈ ಯೋಜನೆಗೆ ಮರುಚಾಲನೆ ನೀಡಲು ಉದ್ದೇಶಿಸಲಾಗಿದೆ.
ಈ ಯೋಜನೆಯಡಿ ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳ ಒಟ್ಟು 25 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ದತ್ತು ಪಡೆದು, ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಶೈಕ್ಷಣಿಕ ಪ್ರಗತಿಯೊಂದಿಗೆ ಸಂಸ್ಕಾರಕ್ಕೂ ಆದ್ಯತೆ:

ಶಾಲಾ ದತ್ತು ಯೋಜನೆಯಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ನೈತಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ದೇಶಪ್ರೇಮ, ಸ್ವದೇಶಿ ವಸ್ತುಗಳ ಬಳಕೆ, ಪರಿಸರ ಪ್ರಜ್ಞೆ, ಶಿಸ್ತು, ಹಿರಿಯರಿಗೆ ಗೌರವ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲಾಗುತ್ತದೆ.
ಪ್ರಬಂಧ ಸ್ಪರ್ಧೆ, ಆಶುಭಾಷಣ, ಚಿತ್ರಕಲೆ, ಏಕಪಾತ್ರಾಭಿನಯ, ವೇಷಭೂಷಣ ಸ್ಪರ್ಧೆ, ವಿಚಾರ ಸಂಕಿರಣ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಾವನೆ ಬೆಳೆಸಲಾಗುತ್ತದೆ. ಶಾಲಾ ಗ್ರಂಥಾಲಯಗಳ ಅಭಿವೃದ್ಧಿ, ವೃಕ್ಷಾರೋಪಣ, ಸ್ವಚ್ಛತಾ ಅಭಿಯಾನ, ಕ್ರೀಡಾ ಚಟುವಟಿಕೆಗಳಿಗೆ ಪೆÇ್ರೀತ್ಸಾಹ ಹಾಗೂ ಅಗತ್ಯ ಮೂಲಸೌಕರ್ಯಗಳ ಸುಧಾರಣೆಗೂ ಸಹಕಾರ ನೀಡಲಾಗುತ್ತದೆ.

ಶಿಕ್ಷಕರು, ಪಾಲಕರಿಗೂ ತರಬೇತಿ:

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿರುವುದರಿಂದ ನುರಿತ ಶಿಕ್ಷಣ ತಜ್ಞರಿಂದ ಶಿಕ್ಷಕರಿಗೆ ವೃತ್ತಿಪರ ತರಬೇತಿ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಬೋಧನಾ ಕೌಶಲ್ಯ, ಮಕ್ಕಳ ಮನೋವಿಜ್ಞಾನ, ಪರಿಣಾಮಕಾರಿ ಕಲಿಕಾ ವಿಧಾನಗಳು ಹಾಗೂ ಮೌಲ್ಯಾಧಾರಿತ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.
ಪಾಲಕರಿಗೆ ಮಕ್ಕಳ ಶಿಕ್ಷಣ, ಶಿಸ್ತು, ಸಂಸ್ಕಾರ, ಆರೋಗ್ಯ ಹಾಗೂ ಮನೆಯಲ್ಲಿನ ಕಲಿಕಾ ವಾತಾವರಣದ ಮಹತ್ವ ತಿಳಿಸಲಾಗುತ್ತದೆ. ಶಾಲಾ ಚಟುವಟಿಕೆಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರೊಂದಿಗೆ ಸಮಾಲೋಚಿಸಿ ಪರಿಹರಿಸಲು ಪ್ರಯತ್ನಿಸಲಾಗುತ್ತದೆ.

ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಕ್ಕಳಿಗೆ ಅರಿವು:

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಮಟ್ಟದಲ್ಲಿ ಏಕಪಾತ್ರಾಭಿನಯ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಕಿರುಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲು ಸಂಸ್ಥೆ ಉದ್ದೇಶಿಸಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜೊತೆಗೆ ಐದು ಸಮಾಧಾನಕರ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಮಕ್ಕಳ ಪ್ರತಿಭೆಯನ್ನು ಪೆÇ್ರೀತ್ಸಾಹಿಸಲಾಗುತ್ತದೆ.

ಮೂರು ವರ್ಷಗಳಿಗೆ 15ರಿಂದ 20 ಲಕ್ಷ ರೂ. ವೆಚ್ಚದ ಅಂದಾಜು:

25 ಶಾಲೆಗಳ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮೂರು ವರ್ಷಗಳ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಅಂದಾಜು 15ರಿಂದ 20 ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ಸಂಸ್ಥೆ, ದಾನಿಗಳು ಹಾಗೂ ಸಮಾಜದ ಸಹೃದಯಿಗಳ ಸಹಕಾರದೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಯೋಜನೆಯ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (Sಆಒಅ) ಹಾಗೂ ಸ್ಥಳೀಯ ಗ್ರಾಮಸ್ಥರ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಿದ್ದು, ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಪರಿಶೋಧನೆಗೆ ಆದ್ಯತೆ ನೀಡಲಾಗುತ್ತದೆ.

ಸದ್ಗುರುಗಳ ಕನಸಿನ ಸಾಕಾರಕ್ಕೆ ಸಂಕಲ್ಪ:

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವುದು ಭಾರತೀಯ ಸುರಾಜ್ಯ ಸಂಸ್ಥೆಯ ಮೂಲ ಆಶಯವಾಗಿದೆ. ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗದೆ ವ್ಯಕ್ತಿತ್ವ ರೂಪಿಸುವ ಹಾಗೂ ಸಮಾಜದ ಒಳಿತಿಗೆ ಶ್ರಮಿಸುವ ಜವಾಬ್ದಾರಿಯುತ ನಾಗರಿಕರನ್ನು ನಿರ್ಮಿಸುವ ಸಾಧನವಾಗಬೇಕು ಎಂಬ ಸದ್ಗುರುಗಳ ಚಿಂತನೆ ಸಂಸ್ಥೆಯ ಕಾರ್ಯಗಳಿಗೆ ಪ್ರೇರಣೆಯಾಗಿದೆ.
ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳ ಅನುಮತಿ ಮತ್ತು ಸಹಕಾರದೊಂದಿಗೆ 25 ಶಾಲೆಗಳ ದತ್ತು ಸ್ವೀಕಾರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಸ್ಥೆ ಮುಂದಾಗಿದೆ. ಗ್ರಾಮೀಣ ಮಕ್ಕಳಿಗೆ ಸಮಾನ ಶೈಕ್ಷಣಿಕ ಅವಕಾಶ ಕಲ್ಪಿಸಿ, ಜ್ಞಾನವಂತ, ಗುಣವಂತ, ದೇಶಭಕ್ತ ಹಾಗೂ ಜವಾಬ್ದಾರಿಯುತ ಯುವ ಪೀಳಿಗೆಯನ್ನು ನಿರ್ಮಿಸುವುದೇ ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕುಲಕರ್ಣಿ, ಗೌರವಾಧ್ಯಕ್ಷ ಬಿ.ಬಿ. ಪೂಜಾರಿ, ಶಾಂತಿಕುಟೀರ ಟ್ರಸ್ಟ್ ಕನ್ನೂರಿನ ಅಧ್ಯಕ್ಷ ಗೋವಿಂದಲಾಲ್ ಬಾಹೇತಿ ಸೇರಿದಂತೆ ಇತರ ಸದಸ್ಯರು, ದತ್ತು ಶಾಲೆಯ ಮುಖ್ಯಗುರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.