
ಮುದ್ದೇಬಿಹಾಳ: ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಡ್ಬಿ ಸಮೃದ್ಧಿ (ಪ್ರಯಾಸ್)ಯೋಜನೆಯಡಿ ೫೦ ಸಾವಿರದಿಂದ ಗರಿಷ್ಠ ೫ ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಾನಂದ ಪಿ. ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶುಕ್ರವಾರ ನಡೆದ ಸಿಡ್ಬಿ ಸಮೃದ್ಧಿ ಯೋಜನೆಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ೧೯೮೨ರಲ್ಲಿ ಆರಂಭವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಉದ್ಯಮಗಳಿಗೆ ಆರ್ಥಿಕ ಉತ್ತೇಜನ ನೀಡುವ ಉದ್ದೇಶದಿಂದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ) ಜತೆ ಒಪ್ಪಂದ ಮಾಡಿಕೊಂಡಿದೆ. ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರು ಹಾಗೂ ಈಗಾಗಲೇ ಉದ್ಯಮ ನಡೆಸುತ್ತಿರುವವರು ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಿಡ್ಬಿ ಸಮೃದ್ಧಿ (ಪ್ರಯಾಸ್) ಯೋಜನೆಯಡಿ ಸ್ವಯಂ ಉದ್ಯೋಗ, ಕಿರು ಉದ್ಯಮ ಹಾಗೂ ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೆ ೫೦ ಸಾವಿರದಿಂದ ಗರಿಷ್ಠ ೫ ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಫಲಾನುಭವಿಯ ಅರ್ಹತೆ, ಉದ್ಯಮದ ಅಗತ್ಯತೆ ಹಾಗೂ ಸಂಸ್ಥೆಯ ನಿಯಮಗಳ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರವಾಗಲಿದೆ. ಪ್ರತಿಯೊಬ್ಬರಿಗೂ ಗರಿಷ್ಠ ೫ ಲಕ್ಷ ಸಾಲ ದೊರೆಯುತ್ತದೆ ಎಂಬುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
ಪತ್ರಕರ್ತ ಶೇಖ್ ಲಾಡ್ಲೆಮಶ್ಯಾಕ ನದಾಫ್ ಅವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಕೆರೆಗಳ ಸ್ವಚ್ಛತೆ, ಬಡವರ ಮನೆ ನಿರ್ಮಾಣಕ್ಕೆ ನೆರವು, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಯೋಜನೆಯ ವತಿಯಿಂದ ಕೈಗೊಳ್ಳಲಾಗುತ್ತಿದ್ದು ಇಂತಹ ಜನಪರ ಕಾರ್ಯಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಯೋಜನೆಯ ಹಣಕಾಸು ಪ್ರಬಂಧಕ ಮನೋಹರ ಅವರು ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು, ಅರ್ಹತೆ, ಸಾಲ ಪಡೆಯುವ ಪ್ರಕ್ರಿಯೆ, ಅನ್ವಯಿಸುವ ಬಡ್ಡಿದರ ಹಾಗೂ ಇತರ ಶುಲ್ಕಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸದಾನಂದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೊರೆಯುವ ವಿವಿಧ ಆರ್ಥಿಕ ಸೌಲಭ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಲಾಯಪ್ಪ ನಂದ್ಯಾಳ, ಸಿಬ್ಬಂದಿಗಳಾದ ಮಹಾಂತೇಶ, ಸಂಗೀತ, ವಿಶ್ವನಾಥ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.






















