
ಸೈದಾಪುರ:ಬಣಜಿಗ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟಿತರಾಗಿ, ಸಂವಿಧಾನಬದ್ಧವಾಗಿ ದೊರೆಯುವ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು ಎಂದು ರಾಜ್ಯ ಬಣಜಿಗರ ಸಮಾಜದ ಸಂಘಟನಾ ಕಾರ್ಯದರ್ಶಿ ಮಲಕಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಐರೆಡ್ಡಿ ಕಲ್ಯಾಣ ಮಂಟಪದಲ್ಲಿ ಸೈದಾಪುರ ವಲಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಬಣಜಿಗ ಸಮಾಜದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ೨ಎ ಪ್ರವರ್ಗದ ಜಾತಿ ಪ್ರಮಾಣ ಪತ್ರ ಪಡೆಯುವ ಕುರಿತು ವಿವಿಧ ಹಂತಗಳಲ್ಲಿ ನ್ಯಾಯಾಲಯದ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಜನರು ಕಾನೂನುಬದ್ಧವಾಗಿ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು. ಯಾವುದೇ ಸಮುದಾಯದ ವಿರುದ್ಧ ಹೋರಾಟ ನಡೆಸುವುದು ಸಂಘಟನೆಯ ಉದ್ದೇಶವಲ್ಲ. ಬದಲಾಗಿ ಬಣಜಿಗ ಸಮಾಜಕ್ಕೆ ಸಂವಿಧಾನ ಹಾಗೂ ಕಾನೂನುಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಪಡೆಯುವುದೇ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ವಲಯಾಧ್ಯಕ್ಷ ಗಂಗಾಧರ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳ ರಾಯಚೂರು, ಆರ್.ಜಿ.ಶೆಟಗಾರ್ ಕಲಬುರಗಿ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ, ಮಲ್ಲಿಕಾರ್ಜುನ ಅರುಣಿ, ಸೂಗುರೇಶ ವಾರದ್, ಮಹೇಶ್ಚಂದ್ರ ವಾಲಿ, ಸಂಜೀವಕುಮಾರ ಗುರುಮಠಕಲ್, ಬಸವರಾಜ ವಡಿಗೇರಾ, ಮಹೇಶ್ಚಂದ್ರ ಶಹಾಪುರ, ಸುರೇಶ ಸುರಪೂರ, ಅನ್ನಪೂರ್ಣ ಜವಳಿ, ನೀಲಕಂಠ ಹುಣಸಗಿ, ಮಲ್ಲಿಕಾರ್ಜುನ ಬಳೆ, ಬನ್ನಪ್ಪ ಬೆಟ್ಟಪ್ಪನೋರ್, ಕೈಲಾಸ್ ಆಸ್ಪಲ್ಲಿ, ಸೂಗಪ್ಪ ಸಾಹುಕಾರ, ಸಂತೋಷ ಖಾನವಳಿ, ಶರಣು ಚಂದ್ರಗಿರಿ, ಸಂತೋಷ ಚಂದ್ರಗಿರಿ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಣಜಿಗ ಸಮಾಜದವರು ಸೇರಿದಂತೆ ಇತರರಿದ್ದರು.
ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ಪರಸ್ಪರ ಸಹಾಯ, ಸಹಕಾರ ನೀಡಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವAತಹ ಬಲಿಷ್ಠ ಸಂಘಟನೆಯನ್ನು ಕಟ್ಟಬೇಕು. ಯಾದಗಿರಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸೈದಾಪುರದಲ್ಲಿ ಬಣಜಿಗ ಸಮಾಜದ ಜಾಗೃತಿ ಸಮಾವೇಶ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸೂಗರೇಶ ವಾರದ್ ಸುರಪೂರ, ರಾಜ್ಯ ಕಾರ್ಯಕಾರಣಿ ಸದಸ್ಯ


































