
ಯಾದಗಿರಿ: ಖಾರಿಫ್ ಹಂಗಾಮಿನ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಕೇಂದ್ರದ ಬರ ಅಧ್ಯಯನ ತಂಡವು ಭಾನುವಾರ ಶಹಾಪುರ ತಾಲೂಕಿನ ಗುಂಡಳ್ಳಿ, ದೊರನಹಳ್ಳಿ, ಬಿದರಣಿ, ಮದ್ದರಕಿ ಹಾಗೂ ಮುಡಬೂಳ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿತು.
ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಡಾ. ಮನ್ ಸಿಂಗ್ ಅವರ ನೇತೃತ್ವದ ತಂಡವು ಗುಂಡಳ್ಳಿ ಗ್ರಾಮದ ರೈತ ನಿಂಗವ್ವ ಅವರ ಹತ್ತಿ ಹೊಲಕ್ಕೆ ಭೇಟಿ ನೀಡಿ ಒಣಗಿದ ಬೆಳೆ ವೀಕ್ಷಿಸಿತು. ರೈತರಾದ ಶರಣಪ್ಪ ಸೇರಿದಂತೆ ಸ್ಥಳೀಯ ರೈತರಿಂದ ಬೆಳೆ ಹಾನಿ, ಮಳೆ ಕೊರತೆ ಹಾಗೂ ಕೃಷಿ ವೆಚ್ಚದ ಕುರಿತು ಮಾಹಿತಿ ಪಡೆದುಕೊಂಡಿತು.
ಒAದೂವರೆ ಎಕರೆ ಜಮೀನಿನಲ್ಲಿ ಸುಮಾರು ?೩೦ ಸಾವಿರ ವೆಚ್ಚ ಮಾಡಿ ಹತ್ತಿ ಬಿತ್ತನೆ ಮಾಡಲಾಗಿದ್ದು, ಮಳೆ ಕೊರತೆಯಿಂದ ನಿರೀಕ್ಷಿತ ಇಳುವರಿ ಬಾರದಿರುವುದಾಗಿ ರೈತರು ತಂಡದ ಗಮನಕ್ಕೆ ತಂದರು. ಇದೇ ವೇಳೆ ದೇವೇಂದ್ರಪ್ಪ, ಮೊಹಮ್ಮದ್ ಖಾದ್ರಿ, ಸಿದ್ದಣ್ಣ, ಕಾಶಿಪತಿ ಹಾಗೂ ರಮೇಶ ಚವ್ಹಾಣ ಸೇರಿದಂತೆ ರೈತರು ಬೆಳೆ ನಷ್ಟದ ಕುರಿತು ವಿವರಿಸಿದರು.
ನಂತರ ದೊರನಹಳ್ಳಿ ಗ್ರಾಮಕ್ಕೆ ತೆರಳಿದ ತಂಡವು ಹತ್ತಿ, ತೊಗರಿ ಸೇರಿದಂತೆ ಒಣಗಿದ ಬೆಳೆಗಳನ್ನು ಪರಿಶೀಲಿಸಿತು. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಲ್ಲಪ್ಪ, ಹಣಮಂತಪ್ಪ ಹಾಗೂ ಇತರ ರೈತರು ತಿಳಿಸಿದರು.
ತೀವ್ರ ಮಳೆ ಕೊರತೆ, ನೀರಿನ ಅಭಾವ, ಕೃಷಿ ಚಟುವಟಿಕೆಗಳ ಮೇಲಾದ ಪರಿಣಾಮ ಹಾಗೂ ರೈತರ ಸಮಸ್ಯೆಗಳ ಕುರಿತು ತಂಡವು ಮಾಹಿತಿ ಸಂಗ್ರಹಿಸಿತು. ಬಿದರಣಿ ಮತ್ತು ಮುಡಬೂಳ ಗ್ರಾಮಗಳಲ್ಲಿಯೂ ಬಿಟಿ ಹತ್ತಿ, ತೊಗರಿ ಬೆಳೆ ಹಾನಿ ಹಾಗೂ ನೀರು ಸರಬರಾಜು ಸಮಸ್ಯೆಗಳನ್ನು ಪರಿಶೀಲಿಸಿ ತಂಡವು ದೇವದುರ್ಗದತ್ತ ಪ್ರಯಾಣ ಬೆಳೆಸಿತು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ಸೇರಿದಂತೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆರ್ಡಿಪಿಆರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ತಂಡಕ್ಕೆ ಅಗತ್ಯ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟೂರು, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ, ಶಹಾಪುರ ತಹಸೀಲ್ದಾರ್, ತಾಪಂ ಇಒ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬರ ಅಧ್ಯಯನದ ಬಳಿಕ ಕೇಂದ್ರದ ತಂಡಗಳು ರಾಜ್ಯದಲ್ಲಿನ ಬೆಳೆ ಹಾನಿ ಹಾಗೂ ರೈತರ ಸಂಕಷ್ಟದ ಕುರಿತು ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿವೆ.























