Home ಜಿಲ್ಲೆ ಅರ್ಕಾಟ್ ದರ್ಗಾ ಉರುಸು: ಸೆ. ೨೩ರಂದು ಭವ್ಯ ಶಾಂತಿಯಾತ್ರೆ

ಅರ್ಕಾಟ್ ದರ್ಗಾ ಉರುಸು: ಸೆ. ೨೩ರಂದು ಭವ್ಯ ಶಾಂತಿಯಾತ್ರೆ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೧: ನಗರದ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಶ್ರದ್ಧಾ ಭಕ್ತಿಯಿಂದ ಜರುಗಲಿದ್ದು, ಇದರ ಅಂಗವಾಗಿ ಸೆ. ೨೩ರಂದು ‘ಝೂಲೂಸ್-ಎ-ಗೌಸಿಯಾ’ ಬೃಹತ್ ಶಾಂತಿಯಾತ್ರೆ ನಡೆಯಲಿದೆ ಎಂದು ಧರ್ಮಗುರು ಮೌಲಾನಾ ನೌಷಾದ್ ಆಲಂ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉರುಸಿನ ಅಂಗವಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗಿದೆ. ಮಾನವೀಯತೆ, ಶಾಂತಿ ಮತ್ತು ಸಹೋದರತೆಯ ತತ್ವಗಳನ್ನು ಸಾರಿದ ಹಜರತ್ ಸೈಯ್ಯದ್ ನಾ ಅಬ್ದುಲ್ ಷಾ ಖಾದ್ರಿ ಅವರ ಉರುಸಿನಲ್ಲಿ ಹಿಂದೂ-ಮುಸ್ಲಿA ಬಾಂಧವರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ದರ್ಗಾದಲ್ಲಿ ಹಸಿದವರಿಗೆ ಅನ್ನದಾನ ಹಾಗೂ ಆರೋಗ್ಯ ಸಮಸ್ಯೆ ಎದುರಿಸುವವರಿಗೆ ಪಾರಂಪರಿಕ ಆಯುರ್ವೇದ ಔಷಧೋಪಚಾರದ ವ್ಯವಸ್ಥೆಯಿದ್ದು, ಇಲ್ಲಿ ದವಾ (ಔಷಧ) ಮತ್ತು ದುವಾ (ಪ್ರಾರ್ಥನೆ) ಎರಡೂ ದೊರೆಯುತ್ತವೆ ಎಂದು ಹೇಳಿದರು.
ಸೆ. ೨೩ರಂದು ದರ್ಗಾದ ಪ್ರಸ್ತುತ ಸಜ್ಜಾದೆ ನಷೀನ್ ಹಜರತ್ ಇಕ್ಬಾಲ್ ಪೀರಾ ಹುಸೈನಿ ಹಾಗೂ ಅವರ ಪುತ್ರ ಡಾ. ಸೈಯ್ಯದ್ ತಕೀ ಪೀರಾ ಹುಸೈನಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ಸೊಲ್ಲಾಪುರ ನಾಕಾದಿಂದ ಭವ್ಯ ಶಾಂತಿಯಾತ್ರೆ ಆರಂಭವಾಗಿ, ಶಹಾಪುರ ದರ್ವಾಜಾ, ಸರಾಫ್ ಬಜಾರ್, ಗಾಂಧಿ ವೃತ್ತ, ಅತಾವುಲ್ಲಾ ಸರ್ಕಲ್, ಬಡಿಕಮಾನ್, ಜಾಮಿಯಾ ಮಸೀದಿ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರ್ಗಾ ತಲುಪಲಿದೆ. ಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಶಾಂತಿಯಾತ್ರೆಯ ಹಿಂದಿನ ದಿನವಾದ ಸೆ. ೨೨ರಂದು ವಿಚಾರ ಸಂಕಿರಣ ನಡೆಯಲಿದ್ದು, ಸೆ. ೨೩ರಂದು ದರ್ಗಾ ಆವರಣದಲ್ಲಿ ಪವಿತ್ರ ಸಂದಲ್ ಕಾರ್ಯಕ್ರಮ ಜರುಗಲಿದೆ. ನಂತರ ಮುಷಾಯಿರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉರುಸಿನಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಎಂ.ಎಸ್. ಮುಜಾವರ, ಇರಾಪ ಸುನ್ನೆವಾಲೆ, ಮಹೇಪೊಜ ಅಲಿ ಬಾಗವಾನ, ಮೌಲಾನಾ ಹುಸೇನ ರಜ್ವಿ ಉಪಸ್ಥಿತರಿದ್ದರು.