Home ಜಿಲ್ಲೆ ವರ್ಷದೊಳಗೆ ಅನುಭವ ಮಂಟಪ ಪೂರ್ಣ: ಖಂಡ್ರೆ

ವರ್ಷದೊಳಗೆ ಅನುಭವ ಮಂಟಪ ಪೂರ್ಣ: ಖಂಡ್ರೆ

ಬಸವಕಲ್ಯಾಣ: ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ನೀಡಿದ ಬಸವಣ್ಣನವರು ಮನುಕುಲದ ಸೂರ್ಯ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಪಟ್ಟಣದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎA. ಬೇಗ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಸ್ವಾಭಿಮಾನಿ ತತ್ವನಿಷ್ಠ ಶರಣರ ವತಿಯಿಂದ ನಡೆಯುತ್ತಿರುವ ಕಲ್ಯಾಣ ಪರ್ವ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಬಸವಕಲ್ಯಾಣದ ಅನುಭವ ಮಂಟಪಕ್ಕೆ ಸರ್ಕಾರದ ವತಿಯಿಂದ ಅನುದಾನ ತಂದು ನಿರ್ಮಾಣ ಮಾಡಲಾಗುತ್ತಿದೆ. ಅನುಭವ ಮಂಟಪದ ೭೭೦ ಕಂಭಗಳ ಮೇಲೆ ೭೭೦ ಶರಣರ ವಚನಗಳನ್ನು ಬರೆಸಿ ಮಾದರಿಯಾಗಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡದವರು ಒಂದಾಗಿ ಇವನಮ್ಮವ ಎಂದು ಬಾಳಬೇಕು. ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹಾಗೂ ಪೂಜ್ಯ ಗಂಗಾಮಾತಾಜಿ ಒಂದಾಗಿ ಪರ್ವ ನಡೆಸಿದರು ಐಕ್ಯತೆ ಸಾರಿದಂತಾಗುತ್ತದೆ ಎಂದು ಖಂಡ್ರೆ ನುಡಿದರು.
ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಪಟ್ಟಣದ ಪರುಷ ಕಟ್ಟೆ ಇಂದಿಗೂ ಅಭಿವೃದ್ಧಿ ಕಾಣದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ ಎಂದು ಸ್ವಾಭಿಮಾನಿ ಕಲ್ಯಾಣ ಪರ್ವ ರಜತ ಮಹೋತ್ಸವದ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ಗುರುಬಸವ ಸಂದೇಶವಾದ ಇವನಮ್ಮವ ಎನ್ನದಿದ್ದರೆ ಬಸವ ತತ್ವಕ್ಕೆ ಉಳಿಗಾಲವಿಲ್ಲ. ವೈಯಕ್ತಿಕ ಸ್ವಾರ್ಥ ಮತ್ತು ಹಿತಾಸಕ್ತಿ ತೊರೆದು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡದಿದ್ದರೆ ಪೂಜ್ಯ ಮಾತಾಜಿಯವರ ಶ್ರಮ ವ್ಯರ್ಥವಾಗುತ್ತದೆ. ಇದಕ್ಕೆ ಅವರ ನಿಜಾನುಯಾಯಿಗಳಾದ ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ ಮಾತನಾಡಿ ಮಾತೆ ಮಹಾದೇವಿ ಅವರಂಥ ಧರ್ಮಪ್ರಚಾರಕರು ಮತ್ತೊಬ್ಬರಿಲ್ಲ. ಬಸವ ವಚನಗಳನ್ನು ಮನೆಮನಕ್ಕೆ ತಲುಪಿಸಿದ ಕ್ರಾಂತಿಯ ಕುಡಿ ಅವರಾಗಿದ್ದರು. ಅವರು ಕಟ್ಟಿದ ಸಂಸ್ಥೆಯಲ್ಲಿ ಇಂದು ಸ್ವಾರ್ಥಿಗಳು ತುಂಬಿಕೊAಡು ಹಾಳುಗೆಡವುತ್ತಿರುವುದು ಶೋಚನೀಯ ಎಂದರು.
ಸಾಮೂಹಿಕ ಪ್ರಾರ್ಥನೆ ಕೃತಿಯನ್ನು ಬಸವಕಲ್ಯಾಣ ಬಸವ ಮಹಾಮನೆಯ ಪೂಜ್ಯ ಶ್ರೀ ಡಾ. ಸಿದ್ಧರಾಮ ಬೆಲ್ದಾಳ ಶರಣರು ದಿವ್ಯ ಸಾನಿಧ್ಯ ವಹಿಸಿ ಬಿಡುಗಡೆಗೊಳಿಸಿದರು. ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಾತಾಜಿಯವರು ಆರಂಭಿಸಿದ ಸ್ವತಂತ್ರ ಧರ್ಮದ ಹೋರಾಟ ಮುಂದುವರೆಯಲಿ ಎಂದರು.
ಯಾವ ಮಠಾಧೀಶರೂ ಮಾಡದ ಕಾರ್ಯ ಇಂದು ಕ್ರಿಯಾಮೂರ್ತಿಗಳು ಮಾಡುತಿದ್ದಾರೆ. ಅಂತಹ ಕ್ರಿಯಾಮೂರ್ತಿಗಳನ್ನು ಮಾತಾಜಿಯವರು ತಯಾರಿಸಿ ಹೋಗಿದ್ದಾರೆ ಎಂದು ಶ್ರೀಕಾಂತ ಸ್ವಾಮಿ ತಿಳಿಸಿದರು.
ಮಾತಾಜಿಯವರು ಸಂಪಾದಿಸಿದ ಭೌತಿಕ ಆಸ್ತಿ ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಸಿಗದೇ ಇರಬಹುದು. ಆದರೆ ಅವರ ಆಶೀರ್ವಾದವೆಂಬ ಸಂಪತ್ತು ಸದಾ ಅವರ ಜೊತೆಗಿದೆ ಎಂದರು.
ಧಾರವಾಡದ ಅಬ್ದುಲ್ ರಜಾಕ್ ಖಾದ್ರಿ ಸತ್ತೂರು ಇವರು ವಚನ ಚಿಂತನೆ ದಿನಪತ್ರಿಕೆ ಬಿಡುಗಡೆಗೊಳಿಸಿದರು. ಚಿತ್ರದುರ್ಗದ ತರಂಗಿಣಿ ನೃತ್ಯ ಸಭೀಕರ ಗಮನ ಸೆಳೆಯಿತು.
ವೇದಿಕೆ ಮೇಲೆ ಚಿಕ್ಕಮಗಳೂರಿನ ಪೂಜ್ಯ ಶ್ರೀ ಡಾ. ಜಯಬಸವಾನಂದ ಸ್ವಾಮೀಜಿ, ಆಂಧ್ರಪ್ರದೇಶದ ಪೂಜ್ಯ ಬಸವೇಶ್ವರ ಸ್ವಾಮೀಜಿ, ಪೂಜ್ಯ ಗುರುಸ್ವಾಮಿಗಳು, ಪೂಜ್ಯ ಸತ್ಯಾದೇವಿ ಮಾತಾಜಿ, ಶಾಂತಾದೇವಿ ಮಾತಾಜಿ, ವಚನಶ್ರೀ ಮಾತಾಜಿ, ಬಸವರಾಜ ಪಾಟೀಲ ಶಿವಪುರ, ಭೀಮರಾವ ಬಿರಾದಾರ, ಮಧು ಇಟಕ್ಯಾಳ, ಡಾ.ಮಹೇಶ ಬಿರಾದಾರ, ಬೆಳಗಾವಿ ಅಶೋಕ ಬೆಂಡಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಸ್ವಾಗತಿಸಿದರು. ಬಸವರಾಜ ಸಂಗಮದ ನಿರೂಪಿಸಿದರು. ಪ್ರಾರ್ಥನಾ ಚಟನಳ್ಳಿ ವಂದಿಸಿದರು.