Home ಜಿಲ್ಲೆ ಕಳಪೆ ತರಕಾರಿ ಬೀಜ ವಿತರಣೆ ಆರೋಪ: ಕಲ್ಯಾಣ ಕರ್ನಾಟಕದ ಎಸ್‌ಸಿ-ಎಸ್‌ಟಿ ರೈತರಿಗೆ ಅನ್ಯಾಯ : ರಾಘವೇಂದ್ರ...

ಕಳಪೆ ತರಕಾರಿ ಬೀಜ ವಿತರಣೆ ಆರೋಪ: ಕಲ್ಯಾಣ ಕರ್ನಾಟಕದ ಎಸ್‌ಸಿ-ಎಸ್‌ಟಿ ರೈತರಿಗೆ ಅನ್ಯಾಯ : ರಾಘವೇಂದ್ರ ಗಿರಿಣಿ

ಯಾದಗಿರಿ: ಜು.೨೯:ತೋಟಗಾರಿಕೆ ಇಲಾಖೆಯ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ವಿತರಣೆ ಮಾಡಲಾಗಿರುವ ತರಕಾರಿ ಬೀಜಗಳು ಕಳಪೆ ಗುಣಮಟ್ಟದ್ದಾಗಿದ್ದು, ಇದರಿಂದ ಸಾವಿರಾರು ರೈತರಿಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಹಾಗೂ ರೈತಪರ ಹೋರಾಟಗಾರ ರಾಘವೇಂದ್ರ ಗಿರಿಣಿ ಆರೋಪಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

೨೦೨೪-೨೫ ಹಾಗೂ ೨೦೨೫-೨೬ನೇ ಸಾಲಿನಲ್ಲಿ ತರಕಾರಿ ಬೀಜಗಳ ವಿತರಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ಸಂಬAಧಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಎರಡು ವರ್ಷಗಳಲ್ಲಿ ?೫೯ ಕೋಟಿ ಅನುದಾನದಲ್ಲಿ ತರಕಾರಿ ಬೀಜಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಖರೀದಿಸಿ ರೈತರಿಗೆ ವಿತರಿಸಲಾಗಿದೆ. ಇದು ಆರ್ಥಿಕ ಶಿಸ್ತು ಹಾಗೂ ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು.

ಆರ್ಥಿಕ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರಿಗಳು ಮನಬಂದAತೆ ಬೀಜಗಳನ್ನು ಖರೀದಿಸಿ ವಿತರಣೆ ಮಾಡಿದ್ದಾರೆ. ಬೀಜ ಪೂರೈಕೆಗೆ ಆಯ್ಕೆಯಾದ ಕೆಲ ಏಜೆನ್ಸಿಗಳ ವಿಳಾಸಗಳಿಗೆ ಭೇಟಿ ನೀಡಿದಾಗ ಅಲ್ಲಿ ಬೀಜ ಉತ್ಪಾದನಾ ಘಟಕಗಳೇ ಇಲ್ಲದೆ, ಬದಲಾಗಿ ಅಪಾರ್ಟ್ಮೆಂಟ್‌ಗಳು ಕಂಡುಬAದಿವೆ ಎಂದು ದೂರಿದರು.

ಬೀಜಗಳ ಗುಣಮಟ್ಟ ಪರಿಶೀಲನೆಗಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಬೀಜ ತಾಂತ್ರಿಕ ಸಂಶೋಧನಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಸರ್ಕಾರದ ದಾಖಲೆಗಳಲ್ಲಿ ಶೇ.೯೭ರಷ್ಟು ಮೊಳಕೆ ಪ್ರಮಾಣವಿದೆ ಎಂದು ತೋರಿಸಲಾಗಿದೆ. ಆದರೆ ರೈತರು ಪರೀಕ್ಷೆಗೆ ಒಳಪಡಿಸಿದ ಅದೇ ಬೀಜಗಳಲ್ಲಿ ಕೇವಲ ಶೇ.೮ರಿಂದ ಶೇ.೧೫ರಷ್ಟು ಮಾತ್ರ ಮೊಳಕೆ ಪ್ರಮಾಣ ಕಂಡುಬAದಿದೆ. ಈ ಮೂಲಕ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶಾಸಕರು ತಮ್ಮ ಸಮುದಾಯದ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.