
ಅಫ್ಜಲ್‍ಪುರ: ಕಲೆ, ವಾಸ್ತುಶಿಲ್ಪ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್ ಹಾಗೂ ರೇವಣಸಿದ್ದಪ್ಪ ಹೊಟ್ಟಿ ಅವರಿಗೆ ಅಫ್ಜಲ್ ಖಾನ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ‘ಅಫ್ಜಲ್ ಸೇವಾ ಪ್ರಶಸ್ತಿ 2026’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್‍ನ ಮುಖ್ಯ ಟ್ರಸ್ಟಿ ಮಕ್ಸೂದ್ ಅಫ್ಜಲ್ ಜಗೀರ್ದಾರ್ ಅವರು, ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವುದು ಹಾಗೂ ನಮ್ಮ ಸಾಂಸ್ಕøತಿಕ ಪರಂಪರೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಹಿಂದಿನ ಕಾಲದ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಕಲಾವಿದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವಿಶ್ವದ ವಿವಿಧ ಐತಿಹಾಸಿಕ ಸಂಗತಿಗಳ ಕುರಿತು ಮಾಹಿತಿ ನೀಡಿದರು. ಇತಿಹಾಸದ ಅರಿವು ಹಾಗೂ ಕಲಾತ್ಮಕ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 35 ಕಲಾವಿದರು ತಮ್ಮ ಕ್ಯಾಲಿಗ್ರಫಿ ಚಿತ್ರಕೃತಿಗಳನ್ನು ಪ್ರದರ್ಶಿಸಿದರು. ಅವರ ಕಲಾ ಕೊಡುಗೆ ಹಾಗೂ ಭಾಗವಹಿಸುವಿಕೆಯನ್ನು ಗುರುತಿಸಿ ಸಂಘಟಕರ ವತಿಯಿಂದ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಂತರ ಎಲ್ಲ ಭಾಗವಹಿಸುವವರು ಅಫ್ಜಲ್‍ಪುರದಲ್ಲಿರುವ ಅಂದಿನ ಆದಿಲ್‍ಶಾಹಿ ಸೇನಾನಿ ಅಫ್ಜಲ್ ಖಾನ್ ನಿರ್ಮಿಸಿದ ಐತಿಹಾಸಿಕ ಮಹಲ್ ಸ್ಮಾರಕಕ್ಕೆ ಭೇಟಿ ನೀಡಿ, ಅದರ ವಿಶಿಷ್ಟ ಕಲೆ ಮತ್ತು ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು. ಈ ಕಾರ್ಯಕ್ರಮವು ಪರಂಪರೆ ಸಂರಕ್ಷಣೆ ಹಾಗೂ ಕಲೆ, ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಯುವಜನರಲ್ಲಿ ಆಸಕ್ತಿ ಮತ್ತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು.































