
ಕೋಲಾರ,ಸೆ,೧೩- ನಗರದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕಾದಲ್ಲಿ ಕಾನೂನು ಬದ್ದವಾಗಿ ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಕಡ್ಡಾಯವಾಗಿದೆ. ಅನುಮತಿ ಪಡೆಯದೆ ಪ್ರತಿಷ್ಟಾಪನೆ ಮಾಡಿದಲ್ಲಿ ಸಂಬಂಧ ಪಟ್ಟವರ ವಿರುದ್ದ ಕಾನೂನು ಉಲ್ಲಂಘನೆಯ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಅಲೆದಾಡುವ ಬದಲೂ ಒಂದೆ ಕಡೆ ಸಂಬಂಧ ಪಟ್ಟ ಇಲಾಖೆಗಳು ಅನುಮತಿ ನೀಡುವ ಹಾಗೂ ಅನುಮತಿ ನಿರಾಕರಿಸುವಂತ ಆದೇಶಗಳು ಜಾರಿ ಮಾಡುವ ವ್ಯವಸ್ಥೆಯಾದ ಸಿಂಗಲ್ ವಿಂಡೋ ಸಿಸ್ಟಮ್ನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ ಎಂದರು.
ಸಾರ್ವಜನಿಕರವಾಗಿ ಗೌರಿ ಗಣೇಶ ಪ್ರತಿಷ್ಟಾಪನೆ ಮಾಡ ಬೇಕಾದರೆ ಸಾರ್ವಜನಿಕರಿಗೆ ತೊಂದರೆಯಾಗದಂತ ಆಟದ ಮೈದಾನ ಮುಂತಾದ ಕಡೆ ಸೂಕ್ತ ಜಾಗದಲ್ಲಿ ಪ್ರತಿಷ್ಟಾಪನೆ ಮಾಡ ಬೇಕು. ವಿದ್ಯುತ್ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆಯಿಂದ, ಪರಿಸರ ಇಲಾಖೆಯಿಂದ ಅನುಮತಿಗಳನ್ನು ಪಡೆಯ ಬೇಕಾಗಿದೆ ಇವುಗಳೆಲ್ಲಾವು ನಗರಸಭೆಯಲ್ಲಿಯೇ ಒಂದೆಕಡೆ ಅನುಮತಿ ಪತ್ರ ಪಡೆಯುವಂತಾಗಲು ವ್ಯವಸ್ಥೆ ಮಾಡಲಾಗಿದೆ ಸಾರ್ವಜನಿಕರು ಇದನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದರು.
ಪಿ.ಓ.ಪಿ. ಗಣೇಶಗಳನ್ನು ಯಾವೂದೇ ಕಾರಣಕ್ಕೂ ಪ್ರತಿಷ್ಟಾಪನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಿಂದ ಪರಿಸರ ಹಾನಿಯಾಗುವುದರಿಂದ ಅವಕಾಶ ನೀಡುವುದಿಲ್ಲ ಹಾಗಾಗಿ ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿಗಳನ್ನೆ ಬಳಿಸ ಬೇಕಾಗಿದೆ. ಗೌರಿ ಗಣೇಶನ ವಿಸರ್ಜನೆಯನ್ನು ನಗರಸಭೆ ವತಿಯಿಂದ ಕೋಲಾರಮ್ಮ ಕೆರೆ ಅವರಣದ ಕನ್ನಡ ಭವನದ ಸಮೀಪದಲ್ಲಿ ನಿರ್ಮಿಸಿರುವ ಕೃತಕ ನೀರಿನ ಹೊಂಡದಲ್ಲಿ ಬಿಡಬೇಕು.ಗಣೇಶ ಮೂರ್ತಿಯನ್ನು ಹೊಂಡದ ಬಳಿ ತೆಗೆದು ಕೊಂಡು ಹೋದಲ್ಲಿ ಅಲ್ಲಿ ನಮ್ಮ ಸಿಬ್ಬಂದಿಗಳಿದ್ದು ದೊಡ್ಡ ಮೂರ್ತಿಗಳಿದ್ದರೆ ಕ್ರೇನ್ ಸಹಾಯದಿಂದ ವಿಸರ್ಜಿಸಲಾಗುವುದು ಸಣ್ಣದಿದ್ದರೆ ಸಿಬ್ಬಂದಿಗಳೇ ಹೊಂಡದಲ್ಲಿ ವಿಸರ್ಜಿಸುವರು. ವಿಸರ್ಜನೆಗೆ ಮುಂಚೆ ಮೂರ್ತಿಯ ಮೇಲಿನ ಹೂವು ಇತರೆ ವಸ್ತುಗಳನ್ನು ಹೊಂಡದಲ್ಲಿ ಬಿಡಲು ಅವಕಾಶವಿಲ್ಲ ಎಂದರು
ವಿದ್ಯುತ್ ಇಲಾಖೆಗೆ ತಾತ್ಕಲಿಕ ಸಂರ್ಪಕದ ವ್ಯವಸ್ಥೆಗೆ ಶುಲ್ಕ ಪಾವತಿಸ ಬೇಕು. ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಸಂರ್ಪಕವನ್ನು ಪರಿಶೀಲಿಸಿ ನಂತರ ಅನುಮತಿಸುವರು, ಪೊಲೀಸ್ ಇಲಾಖೆಯವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಧ್ವನಿವರ್ಧಕ ಅಳವಡಿಕೆಗೆ ಸಮಯವನ್ನು ನಿಗಧಿ ಪಡೆಸುವರು
ಹಾಗೂ ವ್ಯಾಲೂಂ ಮಿತಿಯನ್ನು ಪಾಲನೆ ಮಾಡಬೇಕು. ಗಣೇಶ ವಿಸರ್ಜನೆಯ ದಿನವನ್ನು ಹಾಗೂ ಮೆರವಣಿಗೆಯ ಮಾರ್ಗಕ್ಕೆ ಅನುಮತಿ ಪಡೆಯ ಬೇಕು. ಪರಿಸರ ಇಲಾಖೆಯಿಂದ ಗಣೇಶ ಮೂರ್ತಿ ಪಿ.ಓ,ಪಿ. ಪ್ಲಾಸ್ಟಿಕ್ ಅಲ್ಲವೆಂದು ಪ್ರಮಾಣಿಕರಿಸಿದ ಪತ್ರ ಹೊಂದಿರ ಬೇಕು. ಎಂದು ವಿವಿಧ ಇಲಾಖೆಯ ನಿಯಮಗಳನ್ನು ವಿವರಿಸಿದರು.
































