Home ಜಿಲ್ಲೆ ವ್ಯಸನಮುಕ್ತ ದಿನಾಚರಣೆ

ವ್ಯಸನಮುಕ್ತ ದಿನಾಚರಣೆ

ಧಾರವಾಡ, ಆ೫: ಮಹಾಂತ ಶಿವಯೋಗಿಗಳು ಅವರು ಮಾದಕ ವ್ಯಸನಿಗಳನ್ನು ಹಾಗೂ ಅವರ ದುಶ್ಚಟಗಳನ್ನು ಹುಡುಕಿ, ತಮ್ಮ ಜೋಳಿಗೆಯಲ್ಲಿ ಮಾದಕ ವಸ್ತುಗಳನ್ನು ಹಾಕಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು ಎಂದು ಮುರುಘಾಮಠದ ಪೂಜ್ಯ ಶ್ರೀ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.


ಅವರು ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಇಲಾಖೆ ಆಯೋಜಿಸಿದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.


ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ನಂಬಿದ್ದರು. ಅವರ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ, ಅದು ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯವಾಗಿತ್ತು ಎಂದು ತಿಳಿಸಿದರು.


ಪೂಜ್ಯ ಮಹಾಂತ ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ಸರಳತೆ, ಶಿಸ್ತು ಮತ್ತು ಸಂಯಮದ ಪಾಠವನ್ನು ಸಾರಿದರು. ಅವರ ಜೀವನವೇ ನಮಗೆ ದೊಡ್ಡ ಸಂದೇಶ. ಅಂತಹ ಮಹಾನ್ ಚೇತನದ ಜನ್ಮದಿನದಂದು, ಯುವಜನತೆ ಒಂದು ದೃಢ ಸಂಕಲ್ಪ ಮಾಡಬೇಕಿದೆ. ವ್ಯಸನವೆಂಬ ಈ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೊಗೆಯುವ ನಿರ್ಧಾರ ಮಾಡಬೇಕಿದೆ ಎಂದು ತಿಳಿಸಿದರು.


ಮಾನವನ ಶರೀರವು ಅತ್ಯುತ್ತಮವಾದದ್ದು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ವ್ಯಸನಕ್ಕೆ ಅಂಟಿಕೊಳ್ಳಬಾರದು. ಶರೀರ ಹಾಳಾದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಅವರು ಹೇಳಿದರು.


ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮಾತನಾಡಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾದಕ ವ್ಯಸನಕ್ಕೆ ಹಾಗೂ ದುಶ್ಚಟಗಳಿಗೆ ಬಲಿಯಾಗಬಾರದು. ವ್ಯಸನದಿಂದ ಉತ್ತಮ ಜೀವನ ಹಾಳಾಗುವುದರಿಂದ ತಮ್ಮ ಜೀವನವನ್ನು ಕಾಪಾಡಿಕೊಳ್ಳಬೇಕು. ಕುಟುಂಬ ಹಾಗೂ ಸಮಾಜವು ದುಶ್ಚಟ ಮತ್ತು ವ್ಯಸನದಿಂದ ಹಾಳಾಗದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು.


ಕುಟುಂಬದ ಮುಖ್ಯಸ್ಥರು ದುಶ್ಚಟಕ್ಕೆ ಬಿದ್ದರೆ ಆ ಕುಟುಂಬದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಸಾವಿರಾರು ಜನರು ದುಶ್ಚಟಗಳಿಗೆ ಬಿದ್ದು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಹಾಗೂ ಪ್ರತಿಯೊಬ್ಬರೂ ದುಶ್ಚಟಕ್ಕೆ ಬಿಳದೆ, ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.


ಡಿಮಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ, ಮಾತನಾಡಿ. ಮಾದಕ ವ್ಯಸನವು ವ್ಯಕ್ತಿಯ ದೇಹಕ್ಕೆ ಮಾತ್ರವಲ್ಲ, ಇಡೀ ಕುಟುಂಬಕ್ಕೂ ಹಾನಿಯನ್ನುಂಟು ಮಾಡುತ್ತದೆ. ವ್ಯಸನದ ಪರಿಣಾಮವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಒಬ್ಬ ಶಿಕ್ಷಕರ ಪ್ರೋತ್ಸಾಹವು ನೂರು ವಿದ್ಯಾರ್ಥಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲದು. ಪ್ರತಿಯೊಬ್ಬ ವ್ಯಕ್ತಿಯ ಜೀವನ ಅಮೂಲ್ಯವಾಗಿದ್ದು, ಮಾದಕ ವ್ಯಸನದಿಂದ ದೂರವಿದ್ದು ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ವರ್ಧನೆ ಮತ್ತು ವ್ಯಸನ ಮುಕ್ತತೆಯ ಉಪಾಯಗಳ ಕುರಿತು ಡಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ ಎಂ. ಅವರು ವಿಶೇಷ ಉಪನ್ಯಾಸ ನೀಡಿದರು. ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ನಾಯಕ ಅವರು ಪ್ರತಿಜ್ಞಾವಿಧಿ ಬೋಧಿಸಿದರು.


ವೇದಿಕೆಯಲ್ಲಿ ಡಿಮ್ಹಾನ್ಸ್ನ ಮುಖ್ಯ ಆಡಳಿತಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಶುಶ್ರ‍್ರೂಷಾಧಿಕಾರಿ ಪಾರ್ವತಿ ಕೆಂಗನೂರು, ಆರ್ಥಿಕ ಸಲಹೆಗಾರ ತಮ್ಮಣ್ಣ ಕೃಷ್ಣಪ್ಪ ಈಳಿಗೇರ ಅವರು ಇದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ನಸೀರಾಬಿ ವೈ. ಶೇಖ ಅವರು ಸ್ವಾಗತಿಸಿದರು. ಡಿಮಾನ್ಸ್ ಮನೋವೈದ್ಯಕೀಯ ಸಮಾಜದ ಕಾರ್ಯಕರ್ತ ಡಾ. ಅಶೋಕ ಕೋರಿ ಅವರು ನಿರೂಪಿಸಿದರು. ಡಿಮಾನ್ಸ್ ಮನೋವೈದ್ಯಕೀಯ ಸಮಾಜದ ಕಾರ್ಯಕರ್ತ ಆರ್.ಎಮ್ ತಿಮ್ಮಾಪುರ ಅವರು ವಂದಿಸಿದರು.


ಕಾರ್ಯಕ್ರಮದಲ್ಲಿ ಮನೋವೈಧ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಂಜುನಾಥ ಭಜಂತ್ರಿ, ಸೈಕ್ಯಾಟ್ರಿಕ್ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಆರ್.ಶ್ರೀವಾಣಿ, ಸಹ ಪ್ರಾಧ್ಯಾಪಕರಾದ ಡಾ. ಸುನೀಲಕುಮಾರ ರೋಣದ, ಪ್ರಶಾಂತ ಪಾಟೀಲ, ಓಬಾ ನಾಯ್ಕ, ಡಾ. ಶ್ರೀಧರ ಕುಲಕರ್ಣಿ ಹಾಗೂ ಡಿಮ್ಹಾನ್ಸ್ ಸಂಸ್ಥೆಯ ಪ್ರಾಧ್ಯಾಪಕರು, ನರ್ಸಿಂಗ್ ವಿದ್ಯಾರ್ಥಿಗಳು, ಇಲಕಲ್ಲ ಮಹಾಂತಪ್ಪನವರ ಅಭಿಮಾನಿಗಳು ಭಾಗವಹಿಸಿದ್ದರು.