Home ಜಿಲ್ಲೆ ತುಮಕೂರು ಮಾಧ್ಯಮಗಳಲ್ಲಿ ಕ್ರಿಯಾಶೀಲತೆಗೆ ಹೆಚ್ಚು ಮೌಲ್ಯ: ನವೀನ್

ಮಾಧ್ಯಮಗಳಲ್ಲಿ ಕ್ರಿಯಾಶೀಲತೆಗೆ ಹೆಚ್ಚು ಮೌಲ್ಯ: ನವೀನ್

ತುಮಕೂರು, ಜೂ. ೨- ಮಾಧ್ಯಮಗಳಲ್ಲಿ ನಿಮ್ಮ ಕ್ರಿಯಾಶೀಲತೆಗೆ ಬಹಳ ಮೌಲ್ಯವಿದೆ. ಹಾಗಾಗಿ ನಿಮ್ಮ ನಿರಂತರ ಅಭ್ಯಾಸದಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಿತ್ತದೆ ಎಂದು ಗುರುರೇಣುಕಾ ಪ್ರೊಡಕ್ಷನ್‌ನ ಪ್ರೊಪ್ರೈಟರ್ ನವೀನ್ ಎನ್.ಜಿ ಹೇಳಿದರು.


ನಗರದ ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದ ಚಾಣಕ್ಯ ಬ್ಲಾಕ್‌ನ ಸೆಮಿನಾರ್ ಹಾಲ್‌ನಲ್ಲಿ ನಡೆದ ಮಾಧ್ಯಮ ಅಧ್ಯಯನ ಕೇಂದ್ರದ ರೇಡಿಯೋ ಸಿದ್ಧಾರ್ಥ ೯೦.೮ ಎಫ್.ಎಂ ಮತ್ತು ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಗಾರದ ಐದನೇ ಘೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಪ್ರಸ್ತುತ ಮಾಧ್ಯಮಗಳು ಜನರಿಗೆ ಸುದ್ದಿಯನ್ನು ನೀಡುವ ದಾವಂತದಲ್ಲಿರುವುದರಿಂದ ನಿಮ್ಮ ಕಾರ್ಯಗಳು ಶರವೇಗದಲ್ಲಿ ನಡೆಯಬೇಕು. ಹಾಗಾಗಿ ನಿಮ್ಮ ಕೆಲಸದಲ್ಲಿ ಪ್ರಾವೀಣ್ಯತೆಯನ್ನು ಬೆಳಡಸಿಕೊಂಡಾಗ ನಿಮ್ಮ ಕೆಲಸಕ್ಕೆ ವೇಗ ಬರುತ್ತದೆ. ಇದರ ಜತೆಗೆ ವಿಡಿಯೋ ಎಡಿಟಿಂಗ್‌ನ ತಂತ್ರಾಂಶಗಳ ಕುರಿತು ಹಾಗೂ ಅದರ ಬಳಕೆಯ ಕುರಿತು ತಿಳಿಸಿದರು.


ಈ ದಿನ ಡಾಟ್ ಕಾಂ ವರದಿಗಾರ ಚಂದನ್ ಮಾತನಾಡಿ, ಸಾಮಾಜಿಕ ಕಳಕಳಿ, ಸಾಮಾಜಿಕ ಜವಾಬ್ದಾರಿ ಇರುವವರು ಪ್ರತಿಯೊಬ್ಬರೂ ಪತ್ರಕರ್ತರಾಗಬಹುದು. ಸಾಮಾಜಿಕ ಕಳಕಳಿ ಇರುವ ವ್ಯಕ್ತಿ ಪತ್ರಕರ್ತನಾದರೆ ಸಮಾಜಕ್ಕೆ ಸಾಕಷ್ಟು ಲಾಭವಿದೆ. ಸಾಮಾಜಿಕವಾಗಿ ದುಡಿಯುವಂತಹ ವ್ಯಕ್ತಿಯ ಕೈ ಲೇಖನಿ ಹಿಡಿದರೆ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ. ಸಾಮಾಜಿಕ ಜೀವನದಲ್ಲಿನ ಸಮಸ್ಯೆಗಳನ್ನು ಗಮನಿಸುವಂತಹ ಸೂಕ್ಷ್ಮತೆಯನ್ನು ಬೆಳೆಸಿಕೊಂಡು ಅದರ ವಿರುದ್ದ ನಿರ್ಭೀತಿಯಿಂದ ನಿಲ್ಲುವವನು ಮಾತ್ರ ಶ್ರೇಷ್ಠ ಪತ್ರಕರ್ತನಾಗಲು ಸಾಧ್ಯ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಗೋಷ್ಠಿಯನ್ನು ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಸಿ.ಡಿ.ಕೃಷ್ಣಮೂರ್ತಿ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ, ನವೀನ್ ಎನ್.ಜಿ. ರೇಡಿಯೋ ವಿಭಾಗದ ಗೌತಮ್, ಹರೀಶ್ ಸೇರಿದಂತೆ ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.