Home ಜಿಲ್ಲೆ ರೈತನ ಎಫ್.ಡಿ ಹಣ ಲಪಟಾಯಿಸಿದ: ಹೊರಂಡಿ ಪಿ.ಕೆ.ಪಿ.ಎಸ್ ಕಾರ್ಯದರ್ಶಿ ವಿರುದ್ಧ ಕ್ರಮ ಜರುಗಿಸಿ

ರೈತನ ಎಫ್.ಡಿ ಹಣ ಲಪಟಾಯಿಸಿದ: ಹೊರಂಡಿ ಪಿ.ಕೆ.ಪಿ.ಎಸ್ ಕಾರ್ಯದರ್ಶಿ ವಿರುದ್ಧ ಕ್ರಮ ಜರುಗಿಸಿ

ಬೀದರ್: ಜು.1:ಜಿಲ್ಲೆಯ ಕಮಲನಗರ ತಾಲೂಕಿನ ಹೊರಂಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಪಿ.ಕೆ.ಪಿ.ಎಸ್) ರೈತನೊಬ್ಬನ ಕಷ್ಟದ ಕಮಾಯಿಯ 1,90,000 ರೂ. ಸ್ಥಿರ ಠೇವಣಿ (ಎಫ್.ಡಿ) ಹಣವನ್ನು ನಕಲಿ ಸಹಿ ಮಾಡಿ ಲಪಟಾಯಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ವಂಚನೆಗೊಳಗಾದ ರೈತ ನ್ಯಾಯ ಕೋರಿ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹೊರಂಡಿ ಗ್ರಾಮದ ನಿವಾಸಿ ಬಸವರಾಜ ತಂದೆ ಗುರುಬಸಪ್ಪ ಫಟ್ಟೆ ಎಂಬುವವರೇ ವಂಚನೆಗೊಳಗಾದ ರೈತ. ಇವರು ತಮ್ಮ ಹಲವು ವರ್ಷಗಳ ದುಡಿಮೆಯ 1,90,000 ರೂಪಾಯಿಗಳನ್ನು ದಿನಾಂಕ 26/12/2025 ರಂದು ಹೊರಂಡಿ ಪಿ.ಕೆ.ಪಿ.ಎಸ್ ಶಾಖೆಯಲ್ಲಿ ಒಂದು ವರ್ಷದ ಅವಧಿಗೆ ಎಫ್.ಡಿ (ರಸೀದಿ ಸಂಖ್ಯೆ 1149) ಮಾಡಿದ್ದರು.

ದುರದೃಷ್ಟವಶಾತ್, ಇವರ ಮಗ ಪ್ರಶಾಂತ ತಂದೆ ಬಸವರಾಜ ಅವರು ದಿನಾಂಕ 18/05/2026 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ದುಡಿಯುವ ಮಗನನ್ನು ಕಳೆದುಕೊಂಡ ಬಸವರಾಜ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ತರಲು ಹಣದ ಅಗತ್ಯವಿದ್ದ ಕಾರಣ, ತಮ್ಮ ಎಫ್.ಡಿ ಹಣವನ್ನು ಹಿಂಪಡೆಯಲು ಅವರು ನಿರ್ಧರಿಸಿದ್ದರು.

ದಿನಾಂಕ 23/06/2026 ರಂದು ಹೊರಂಡಿ ಪಿ.ಕೆ.ಪಿ.ಎಸ್ ಶಾಖೆಗೆ ತೆರಳಿ ತಮ್ಮ ಎಫ್.ಡಿ ರದ್ದುಪಡಿಸಿ ಹಣ ನೀಡುವಂತೆ ಕಾರ್ಯದರ್ಶಿ ಶಿವಕುಮಾರ ಅವರನ್ನು ಕೇಳಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. “ಇಲ್ಲಿ ನಿಮ್ಮ ಹೆಸರಿನಲ್ಲಿ ಯಾವುದೇ ಎಫ್.ಡಿ ಇಲ್ಲ. ಆ ಹಣವನ್ನು ಆಗಲೇ ನಿಮ್ಮ ಮಗನಿಗೆ ನೀಡಲಾಗಿದೆ” ಎಂದು ಕಾರ್ಯದರ್ಶಿ ಉಡಾಫೆಯ ಉತ್ತರ ನೀಡಿದ್ದಾರೆ.

ಮಗ ಬದುಕಿದ್ದಾಗ ಎಫ್.ಡಿ ಹಣ ತೆಗೆದುಕೊಂಡ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹಣ ಡ್ರಾ ಮಾಡಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಬಸವರಾಜ ಪಟ್ಟು ಹಿಡಿದಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಬಸವರಾಜ ಅವರ ನಕಲಿ ಸಹಿ ಮಾಡಿರುವುದು ಪತ್ತೆಯಾಗಿದೆ. ಮಗನ ಸಾವಿನ ಶೋಕದಲ್ಲಿರುವ ವೃದ್ಧ ತಂದೆಗೆ ಮಗನ ನೆಪವೊಡ್ಡಿಯೇ ಬ್ಯಾಂಕ್ ಸಿಬ್ಬಂದಿ ಕಟ್ಟು ಕಥೆ ಕಟ್ಟಿ ಈ ರೀತಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ನನ್ನ ಕಷ್ಟದ ಹಣವನ್ನು ನಕಲಿ ಸಹಿ ಮಾಡಿ, ಭ್ರಷ್ಟಾಚಾರ ನಡೆಸಿ ಲೂಟಿ ಮಾಡಿರುವ ಹೊರಂಡಿ ಪಿ.ಕೆ.ಪಿ.ಎಸ್ ಕಾರ್ಯದರ್ಶಿ ಶಿವಕುಮಾರ ಹಾಗೂ ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನನ್ನ ಹಣವನ್ನು ನನಗೆ ಮರಳಿಸಿ ಕೊಡುವ ಮೂಲಕ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿ ಬಸವರಾಜ ಅವರು ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್ಪಿ) ಸೋಮವಾರ ರಂದು ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿಗಳನ್ನು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೂ ರವಾನಿಸಲಾಗಿದೆ.

ಪೆÇಲೀಸ್ ಇಲಾಖೆ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವ ರೀತಿಯ ತನಿಖೆ ನಡೆಸಿ ನೊಂದ ರೈತನಿಗೆ ನ್ಯಾಯ ಒದಗಿಸಲಿದ್ದಾರೆ ಕಾದು ನೋಡಬೇಕಿದೆ.