
ಬೆಂಗಳೂರು, ಏ.೨೮- ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ (ಕೆಎಸ್‌ಎಪಿಸಿಸಿ) ರೂಪಿಸಲಾಗಿದ್ದು, ಇದರ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡಮಿ ಆಯೋಜಿಸಿದ್ದ ವಿತರೀತ ಬಿಸಿ ಮತ್ತು ಬೆಂಗಳೂರಿನ ಮೇಲೆ ಅದರ ಪರಿಣಾಮ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ
ಮಾತನಾಡಿದ ಅವರು, ಈ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾರಿಗೆ ತರಲು ಪರಿಸರ ಇಲಾಖೆ ವ್ಯಾಪ್ತಿಗೆ ಒಳಪಡುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ -ಎಂಪ್ರಿ ಕ್ರಮ ಕೈಗೊಂಡಿದೆ ಎಂದರು.
ಜಿಲ್ಲಾ ಪಂಚಾಯತ್ ಕಚೇರಿಗಳ ಸಹಯೋಗದೊಂದಿಗೆ ಕೆಎಸ್‌ಎಪಿಸಿಸಿ ಅನುಷ್ಠಾನ ಮತ್ತು ಅದರ ಪ್ರಗತಿಯ ಕುರಿತು ಜಿಲ್ಲಾ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕರ್ನಾಟಕದ ಎಲ್ಲಾ ೩೧ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದೂ ತಿಳಿಸಿದರು.
ಹವಾಮಾನ-ಚೇತರಿಕೆಗೆ ಸಂಬಂಧಿಸಿದಂತೆ ಉತ್ತಮ ರೂಢಿಗಳ ಮಾಹಿತಿಯನ್ನು ಹಂಚಿಕೊಳ್ಳಲು ಏಪ್ರಿಲ್ ೨೦೨೫ ರಲ್ಲಿ ಸಮರ್ಪಿತ ರೇಡಿಯೋ ಕಾರ್ಯಕ್ರಮ “ಹವಮಾನ ಮಿತ್ರ” ಪ್ರಾರಂಭಿಸಲಾಗಿದ್ದು, ಈವರೆಗೆ ೨೪ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡಲಾಗಿದೆ. ಈ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

























