
ಕಲಬುರಗಿ,ಏ.28-ನಗರದ ಎಂ.ಎಸ್ .ಕೆ.ಮಿಲ್ ರಸ್ತೆಯಲ್ಲಿರುವ ಆಲ್ ಬದರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ -ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಗ್ರಾಹಕರ ನ್ಯಾಯಲಯ ವೇದಿಕೆ ಅಧ್ಯಕ್ಷರಾದ ಮಾಲತಿ ರೇಷ್ಮೆ ಅವರು, “ಯುವ-ಜನಾಂಗ ಸಂತರು ಶರಣರು ದಾಸರು ಸೂಫಿಗಳ ಸ್ವಾತಂತ್ರ ಹೋರಾಟಗಾರರ ಸಂವಿಧಾನ ಕರ್ತರ ಆದರ್ಶ ಮೌಲ್ಯಗಳನ್ನು, ವಿಚಾರಗಳನ್ನು ಅವರ ಜೀವನ ಚರಿತ್ರೆಯನ್ನು ಓದುವ ಮುಖಾಂತರ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ವ್ಯಕ್ತಿಗಳಾಗುವುದರ ಜೊತೆಗೆ ಒಳ್ಳೆಯ ಸಮಾಜವನ್ನು, ಒಳ್ಳೆಯ ದೇಶವನ್ನು ಕಟ್ಟುತ್ತಿರಿ ಎಂದರು. ಯುವಜನಾಂಗ ಮನಸ್ಸು ಮಾಡಿದರೆ ಚುನಾವಣೆಗಳಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳನ್ನು ತಡೆಗಟ್ಟಬಹುದು. ಭಾರತದ ಭವಿಷ್ಯ ಯುವ ಜನಾಂಗದ ಮೇಲೆ ನಿಂತಿದ್ದು, ಯುವಕರು ಸತ್ಯ ನ್ಯಾಯ ಧರ್ಮ ಪ್ರಾಮಾಣಿಕತೆ ನಂಬಿಕೆ ವಿಶ್ವಾಸ ಸಮಾನತೆ ಸಹೋದರತ್ವ ಕುರಿತು ಚಿಂತನೆ ನಡೆಸಬೇಕು ಮತ್ತು ಆ ಮಾರ್ಗದಲ್ಲಿ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
‘ಚುನಾವಣೆಗಳಲ್ಲಿ ಹಣ ಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ಎಂಬ ವಿಷಯದ ಕುರಿತು ಹಮ್ಮಿಕೊಂಡಿರುವ ‘ರಾಷ್ಟ್ರೀಯ ವಿಚಾರ ಸಂಕಿರಣ’ ದಲ್ಲಿ ಆಲ್ ಬದರ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಶಮಿಮ, ಗೊಲ್ಲಾಳಪ್ಪ, ವೀರೇಶ, ಬೋರಮ್ಮ, ಭೀಮಣ್ಣ, ದುಂಡಮ್ಮ, ಶಾಹಿನ್, ಹಣಮೇಶ, ಮಲ್ಲೇಶ, ಐಶ್ವರ್ಯ, ವಾಣಿಶ್ರೀ, ಆಯಿಷಾ ಹಾಗೂ ಅಂಬಿಕಾ ಅತ್ಯುತ್ತಮವಾಗಿ ವಿಚಾರ ಮಂಡಿಸಿದ್ದಕ್ಕಾಗಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಮಲ್ಲಮ್ಮ ಮಂಠಾಳ ಅವರು, ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮುಂಬರುವ ಯಾವುದೇ ಚುನಾವಣೆಗಳಲ್ಲಿ ತಮ್ಮ ಮನೆಯಲ್ಲಿ, ಓಣಿಯಲ್ಲಿ, ತಮ್ಮ ಗ್ರಾಮಗಳಲ್ಲಿ, ನಗರಗಳಲ್ಲಿ ಹಣ ಹಂಚಲು ಬಂದವರನ್ನು ತಿರಸ್ಕರಿಸಬೇಕು.ವಿದ್ಯಾರ್ಥಿಗಳು ಕೂಡಾ ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಶಿಕ್ಷಣಾರ್ಥಿಗಳಾದ ದುಂಡಮ್ಮ ಪ್ರಾರ್ಥನಾ ಗೀತೆ ಹಾಡಿದರು.ಬೋರಮ್ಮ ವಂದನಾರ್ಪಣೆ ಮಾಡಿದರು. ಉಪನ್ಯಾಸಕರಾದ ಮಹಾಂತಪ್ಪ ಸ್ವಾಗತಿಸಿದರು.ಉಪನ್ಯಾಸಕರಾದ ಆನಂದಮ್ಮ ನಿರೂಪಣೆ ಮಾಡಿದರು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿಯ ಸಂಸ್ಥಾಪಕ ರಮೇಶ ಆರ್.ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಾನು ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ತಪ್ಪದೆ ನೋಂದಾಯಿಸುತ್ತೇನೆ.ನಾನು ಚುನಾವಣೆಯಲ್ಲಿ ಯಾವುದೇ ಆಸೆ- ಆಮಿಷಗಳಿಗೆ ಬಲಿಯಾಗದೆ ತಪ್ಪದೇ ಮತದಾನ ಮಾಡುತ್ತೇನೆ. ಕ್ರಿಮಿನಲ್ ಆರೋಪ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ. ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಸರಿ ಎನಿಸದೆ ಇದ್ದಲ್ಲಿ ನಾನು ನೋಟಕ್ಕಾದರೂ ತಪ್ಪದೇ ಮತದಾನ ಮಾಡುತ್ತೇನೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






















