Home ಜಿಲ್ಲೆ ಕಲಬುರಗಿ 8,000 ಪೊಲೀಸ್ ಸಿಬ್ಬಂದಿ ನೇಮಕಪೋಲೀಸರು ಸೇವಾ ಧರ್ಮ ಪಾಲಿಸಬೇಕು:ಡಾ.ಜಿ.ಪರಮೇಶ್ವರ

8,000 ಪೊಲೀಸ್ ಸಿಬ್ಬಂದಿ ನೇಮಕಪೋಲೀಸರು ಸೇವಾ ಧರ್ಮ ಪಾಲಿಸಬೇಕು:ಡಾ.ಜಿ.ಪರಮೇಶ್ವರ

ಕಲಬುರಗಿ,ಏ.28: ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಹಂಚಿಕೆ ಪ್ರಮಾಣ ಸಮಸ್ಯೆ ನಿವಾರಣೆಯಾಗಿದ್ದು, ಮೀಸಲಾತಿ ಹಂಚಿಕೆ ಕಾರಣದಿಂದ ನೇಮಕಾತಿಗೆ ತಡೆ ಹಿಡಿಯಲಾಗಿದ್ದ 8,000 ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ನೇಮಕಾತಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಮಂಗಳವಾರ ಕಲಬುರಗಿ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ಜರುಗಿದ 13ನೇ ತಂಡದ ಪಿ.ಎಸ್.ಐ. (ಸಿವಿಲ್), 12ನೇ ತಂಡದ ಆರ್.ಎಸ್.ಐ/ ಸ್ಪೆಷಲ್ ಆರ್.ಎಸ್.ಐ. ಹಾಗೂ 6ನೇ ತಂಡದ ಪಿ.ಎಸ್.ಐ. (ಕೆ.ಎಸ್.ಐ.ಎಸ್.ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ವಿವಿಧ ತುಕಡಿಗಳನ್ನು ವೀಕ್ಷಿಸಿದಲ್ಲದೆ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ನ್ಯಾಯಯುತವಾಗಿ ಹಂಚಿಕೆಯಾಗಿದ್ದರಿಂದ ಇನ್ಮುಂದೆ ಪೊಲೀಸ್ ನೇಮಕಾತಿ ಮಂಡಳಿ ನೇಮಕಾತಿ ಪ್ರಕ್ರಿಯೆ ನಡೆಸಲಿದೆ ಎಂದರು.

ಸಂಬಳಕ್ಕಾಗಿ ಖಾಕಿ ಸೇವೆ ಅಲ್ಲ ಎಂಬುದನ್ನು ಪೊಲೀಸರು ಮೊದಲು ಮನಗಾಣಬೇಕು. ಖಾಕಿ ಗೌರವದ ಸಂಕೇತವಾಗಿದೆ. ಇದು ಉದ್ಯೋಗವಲ್ಲ ಜನ ಸೇವೆಯಾಗಿದೆ. ಎಲ್ಲರಿಗೂ ಖಾಕಿ ಹಾಕಲು ಅವಕಾಶವಿಲ್ಲ. ಸ್ವತ 3 ಬಾರಿ ಗೃಹ ಸಚಿವನಾಗಿದ್ದರು ನನಗೆ ಈ ಅವಕಾಶ ಇಲ್ಲ. ಠಾಣೆಗೆ ಬರುವ ನೊಂದವರಿಗೆ ಕಣ್ಣೀರು ಒರೆಸುವ, ಸಮಯೋಚ್ಚಿತ ಪರಿಹಾರ ಕಂಡುಕೊಳ್ಳುವ ಕೆಲಸ ನಿಮ್ಮಿಂದಾಗಬೇಕು. ತುಳಿತಕ್ಕೊಳಗಾದಂತಹ ಬಡವರು, ಅಲ್ಪಸಂಖ್ಯಾತರು, ಎಸ್.ಸಿ-ಎಸ್.ಟಿ. ಸಮದಾಯದ ಜನರನ್ನು ಮುಖ್ಯ ವಾಹಿನಿಗೆ ತರಲು ನೆರವಾಗುವ ಮೂಲಕ ಪೊಲೀಸರು ಸೇವಾ ಧರ್ಮ ಪಾಲಿಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಕರೆ ನೀಡಿದರು.

ನಮ್ಮ ಸರ್ಕಾರ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ಮನೆ-ಮನೆಗೆ ಪೊಳೀಸ್ ಕಾರ್ಯಕ್ರಮದಡಿ ಸಾರ್ವಜನಿಕರ ಮನೆಗೆ ಪೊಲೀಸರು ಹೋಗಿ ನಿಮ್ಮ ಕಷ್ಟ ಕಾಲದಲ್ಲಿ ನಾವಿದೇವೆ ಎಂಬ ಧೈರ್ಯವನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕೋಮುಗಲಭೆ, ಅಪರಾಧಗಳಿಗೆ ಇಲ್ಲಿ ಅವಕಾಶ ನೀಡುತ್ತಿಲ್ಲ. ನಾಡಿನಲ್ಲಿ ಶಾಂತಿ ವಾತಾವರಣ ಸ್ಥಾಪಿಸಲಾಗಿದೆ. ಇದರ ನಡುವೆಯೂ ಅಲ್ಲಲ್ಲಿ ಹೊರ ರಾಜ್ಯದಿಂದ ಬಂದು ಬ್ಯಾಂಕ್ ದರೋಡೆ, ಚಿನ್ನ ಕಳವು, ಕೊಲೆದಂತಹ ಪ್ರಕರಣಗಳನ್ನು ಸಹ ನಮ್ಮ ಪೊಲೀಸರು ಕ್ಷಿಪ್ರಗತಿಯಲ್ಲಿ ಭೇಧಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆ ಎಂದರು.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಂಚನೆ ಪ್ರಕರಣಗಳು ಹೊಸ ರೂಪಗಳನ್ನು ಪಡೆದುಕೊಂಡಿದ್ದು, ಅದಕ್ಕೆ ತಕ್ಕಂತೆ ಡ್ರೋನ್, ಸಿ.ಸಿ.ಟಿ.ವಿ., ಬಾಡಿ ಕ್ಯಾಮೆರಾಗಳನ್ನು ಪೊಲೀಸರಿಗೆ ಒದಗಿಸಿದ್ದೇವೆ. 52 ವರ್ಷದ ಹಳೆಯದ ಸ್ಲೌಚ್ ಹ್ಯಾಟ್ ಬದಲಾಗಿ ಪಿ-ಕ್ಯಾಪ್ ನೀಡಿ ಪೊಲೀಸರ ಮನೋಸ್ಥೈರ್ಯ ಹೆಚ್ಚಿಸಲಾಗಿದೆ. ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಹೆಚ್ಚುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ನೀತಿ ಜಾರಿಗೆ ತರಲಾಗಿದೆ. 2024ರಲ್ಲಿ 24,000 ಸಾವಿರ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದರೆ 2025ರಲ್ಲಿ ಇದರ ಪ್ರಮಾಣ 14,000ಕ್ಕೆ ಇಳಿಕೆಯಾಗಿದೆ. ಇದು ಆಧುನಿಕ ತಂತ್ರಜ್ಞಾನ ಹೊಂದಿಕೊಂಡಿದ್ದರ ಫಲವಾಗಿದೆ ಎಂದು ಪೊಲೀಸ್ ಇಲಾಖೆಯ ಕಾರ್ಯವನ್ನು ಸಚಿವರು ಪ್ರಶಂಸಿದರು.

ಇಷ್ಟೆಲ್ಲದರ ನಡುವೆ ನಮಗೆ ಡ್ರಗ್ಸ್ ಜಾಲ ಸವಾಲಾಗಿ ಪರಿಣಮಿಸಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ಅದನ್ನು ನಾಶಪಡಿಸಿದ್ದೇವೆ. ಡ್ರಗ್ಸ್ ಜಾಲಕ್ಕೆ ನಮ್ಮ ಯುವಕರು ಬಲಿಯಾಗುತ್ತಿರುವುದು ತುಂಬಾ ಖೇದಕರ ವಿಷಯವಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದ್ದು, ಪೊಲೀಸ್ ಇಲಾಖೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಕಲಬುರಗಿಯ ನಾಗನಹಳ್ಳಿ ಪಿ.ಟಿ.ಸಿ. ನಿಂದ ಇಂದು 97 ಜನ ಪಿ.ಎಸ್.ಐ.ಗಳು ಬುನಾದಿ ತರಬೇತಿ ಪಡೆದು ಕರ್ತವ್ಯಕ್ಕೆ ಅಣಿಯಾಗಿದ್ದಾರೆ. ಕಲಬುರಗಿ ಪಿ.ಟಿ.ಸಿ. ಇಲ್ಲಿಯವರೆಗೆ ಸುಮಾರು 8,000 ಜನರಿಗೆ ತರಬೇತಿ ನೀಡಿದ ಶ್ರೇಯಸ್ಸು ಹೊಂದಿದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪಿ.ಟಿ.ಸಿ ಸ್ಥಾಪನೆ ಹಿಂದೆ ದಿ. ಧರ್ಮಸಿಂಗ್ ಮತ್ತು ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಅಪಾರ ಇದೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಪ್ರಯತ್ನದ ಫಲವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆಂದೆ 371ಜೆ ಕಾಯ್ದೆ ತರಲಾಗಿದೆ. ಪರಿಣಾಮ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಪ್ರತಿ ವರ್ಷ 5,000 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ನಂಬರ್-1:

ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ನಂಬರ್-1 ಸ್ಥಾನದಲ್ಲಿದೆ ಎಂದು ಕಳೆದ ವರ್ಷ ಇಂಡಿಯಾ ಜಸ್ಟೀಸ್ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದು, ಇದು ನಾಡಿನ ಪೊಲೀಸ್ ಸೇವೆಗೆ ಸಂದ ಗೌರವವಾಗಿದೆ. ಇದಲ್ಲದೆ ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ಇಡೀ ದೇಶದಲ್ಲಿಯೆ 3ನೇ ಮಾದರಿ ಠಾಣೆ ಎಂದು ಗುರುತಿಸಲಾಗಿದೆ. ರಾಷ್ಟ್ರದಲ್ಲಿ ಕರ್ನಾಟಕ ಪೊಲೀಸ್ ತನ್ನದೆ ಆದ ಗೌರವ ಹೊಂದಿದ್ದು, ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಲಾಖೆಯ ಸಿಬ್ಬಂದಿಗಳ ಮೇಲಿದೆ. ಕವಿತಾಳ ಮಾದರಿ ಠಾಣೆಗಳು ರಾಜ್ಯದಲ್ಲಿ ಹೆಚ್ಚಲಿ ಎಂದು ಆಶಿಸುವೆ ಎಂದು ಡಾ.ಜಿ.ಪರಮೇಶ್ವರ ತಿಳೀಸಿದರು.

ಪೊಲೀಸ್ ಉದ್ಯೋಗವಲ್ಲ,ಸಮಾಜ ಸೇವೆ:

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರಾಜ್ಯದ ಪೊಲೀಸ್ ಮಾಹಾನಿರ್ದೇಶಕರು ಹಾಗೂ ಮತ್ತು ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಎ. ಸಲೀಮ್ ಅವರು ಸರ್ವರನ್ನು ಸ್ವಾಗತಿಸಿ ಮಾತನಾಡಿ, ಪೊಲೀಸ್ ಉದ್ಯೋಗವಲ್ಲ, ದೇಶದ ಒಳಾಡಳಿತ ರಕ್ಷಣೆಯ ಜವಾಬ್ದಾರಿ ಹೊಂದಿದ ಸಮಾಜ ಸೇವೆಯಾಗಿದೆ. ಇಂದಿಲ್ಲಿ ತರಬೇತಿ ಪಡೆದು ಕೆಲಸಕ್ಕೆ ಅಣಿಯಾಗಿರುವ ನೀವೆಲ್ಲರು ಪ್ರಮಾಣಿಕತೆ, ಶಿಸ್ತು ಮೈಗೂಡಿಸಿಕೊಂಡು ಜನರ ಅಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಇಲಾಖೆಯ ಮಾರ್ಗದರ್ಶಕರಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್, ಸನ್ಮಿತ್ರ, ಆಸರೆ ದಂತಹ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ಪ್ರಶಿಕ್ಷಣಾರ್ಥಿಗಳಿಗೆ ಟ್ರೋಫಿ ಪ್ರದಾನ:

ಇನ್ನು 12 ತಿಂಗಳ ಬುನಾದಿ ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಸೇರಿದಂತೆ ವಿವಿಧ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರೊಬೇಷನರ್ ಪ್ರಶಿಕ್ಷಣಾರ್ಥಿಗಳಿಗೆ ಸಚಿವ ಡಾ.ಜಿ.ಪರಮೇಶ್ವರ ಅವರು ಟ್ರೋಫಿ ಪ್ರದಾನ ಮಾಡಿದರು.
ಆರ್.ಎಸ್.ಐ, ಸ್ಪೆ.ಆರ್.ಎಸ್.ಐ ಹಾಗೂ ಕೆ.ಎಸ್.ಐ.ಎಸ್.ಎಫ್ ಪ್ರಶಿಕ್ಷಣಾರ್ಥಿಗಳಲ್ಲಿ ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ ಪ್ರೊ. ಆರ್.ಎಸ್.ಐ. ಚೇತನಕುಮಾರ ಗುಡ್ಡೆಪ್ಪನವರ ಅವರಿಗೆ ಗೃಹ ಮಂತ್ರಿಗಳ ಟ್ರೋಫಿ, 7.62 ಎಂ.ಎಂ. ಎಸ್.ಎಲ್.ಆರ್ ರೈಫಲ್ ಫೈರಿಂಗ್‌ನಲ್ಲಿ ಪ್ರಥಮಸ್ಥಾನ ಮತ್ತು ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿರುವ ಪ್ರೊ. ಆರ್.ಎಸ್.ಐ. ದಿನೇಶ್ ಇ.ಟಿ ಅವರಿಗೆ ಡಿ.ಜಿ. ಮತ್ತು ಐ.ಜಿ.ಪಿ. ಟ್ರೋಫಿ, 9 ಎಂ.ಎಂ. ಪಿಸ್ತೂಲ್ ಫೈರಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುವ ಪ್ರೊ.ಆರ್.ಎಸ್.ಐ. ಅಶೋಕ ಯಲ್ಲಪ್ಪ ಹೊಸಮನಿ ಅವರಿಗೆ ಟ್ರೋಫಿ ಹಾಗೂ ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ ರಾಮನಗರ ಜಿಲ್ಲೆಯ ಪ್ರೊ. ಆರ್.ಎಸ್.ಐ. ಶರತ್ ಬಿ. ಅವರಿಗೆ ಮುಖ್ಯಮಂತ್ರಿಗಳ ಟ್ರೋಫಿ, ಮುಖ್ಯಮಂತ್ರಿಗಳ ಸ್ವೋರ್ಡ್ ಡಿ.ಜಿ. ಮತ್ತು ಐ.ಜಿ.ಪಿ. ಅವರ ಬ್ಯಾಟನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅದೇ ರೀತಿ ಪಿ.ಎಸ್.ಐ (ಸಿವಿಲ್) ಪ್ರಶಿಕ್ಷಣಾರ್ಥಿಗಳಲ್ಲಿ ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ ಪ್ರೊ. ಪಿ.ಎಸ್.ಐ.(ಸಿವಿಲ್) ಶರಣಬಸಪ್ಪ ಅವರಿಗೆ ಗೃಹ ಮಂತ್ರಿಗಳ ಟ್ರೋಫಿ, ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿರುವ ಪ್ರೊ. ಪಿ.ಎಸ್.ಐ.(ಸಿವಿಲ್) ಅಶೋಕ ಬಾಚೇನಹಳ್ಳಿ ಅವರಿಗೆ ಡಿ.ಜಿ. ಮತ್ತು ಐ.ಜಿ.ಪಿ. ಟ್ರೋಫಿ, 7.62 ಎಂ.ಎಂ. ಎಸ್.ಎಲ್.ಆರ್ ರೈಫಲ್ ಫೈರಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುವ ಪ್ರೊ. ಪಿ.ಎಸ್.ಐ.(ಸಿವಿಲ್) ಸಿದ್ದಪ್ಪ ಮತ್ತು ಪ್ರೊ. ಪಿ.ಎಸ್.ಐ.(ಸಿವಿಲ್) ವೆಂಕಟೇಶ ಗುಡಗುಡಿ ಅವರಿಗೆ ಟ್ರೋಫಿ, 9 ಎಂ.ಎಂ. ಪಿಸ್ತೂಲ್ ಫೈರಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುವ ಪ್ರೊ. ಪಿ.ಎಸ್.ಐ.(ಸಿವಿಲ್) ಪುಟ್ಟರಾಜ್ ಹಿರೇಮಠ ಅವರಿಗೆ ಟ್ರೋಫಿ, ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ ಹಾಸನ ಜಿಲ್ಲೆಯ ಪ್ರೊ. ಪಿ.ಎಸ್.ಐ.(ಸಿವಿಲ್) ಸೀಮ ಜೆ. ಅವರಿಗೆ ಟ್ರೋಫಿ ಹಾಗೂ ಹಾಗೂ ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ ಬೆಳಗಾವಿ ಜಿಲ್ಲೆಯ ಪ್ರೊ. ಪಿ.ಎಸ್.ಐ.(ಸಿವಿಲ್) ಅರುಣ ಕಲ್ಲಪ್ಪ ಮೇಟಿ ಅವರಿಗೆ ಮುಖ್ಯಮಂತ್ರಿಗಳ ಟ್ರೋಫಿ, ಮುಖ್ಯಮಂತ್ರಿಗಳ ಸ್ವೋರ್ಡ್ ಹಾಗೂ ಡಿ.ಜಿ. ಮತ್ತು ಐ.ಜಿ.ಪಿ. ಅವರ ಬ್ಯಾಟನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಂದು ನಡೆದ ಕಾರ್ಯಕ್ರಮದಲ್ಲಿ 02-ಪಿ.ಎಸ್.ಐ. (ಕೆ.ಎಸ್.ಐ.ಎಸ್.ಎಫ್), 09-ಆರ್.ಎಸ್.ಐ/ ಸ್ಪೆಷಲ್ ಆರ್.ಎಸ್.ಐ. ಹಾಗೂ 86-ಪಿ.ಎಸ್.ಐ. (ಸಿವಿಲ್) ಒಟ್ಟು 97 ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದು ನಿರ್ಗಮನಗೊಂಡರು. ಇದೇ ಸಂದರ್ಭದಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹ್ಯಾಂಡ್ ಬುಕ್ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ದೇವಜ್ಯೋತಿ ರೇ, ಈಶಾನ್ಯ ವಲಯದ ಐ.ಜಿ.ಪಿ ಶಾಂತನು ಸಿನ್ಹಾ, ಕಲಬುರಗಿ ನಗರ ಪೊಲೀಸ್ ಅಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಡಿ.ವೈ.ಎಸ್.ಪಿ ರಾಜಣ್ಣ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಶಿಕ್ಷಾಣಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಸಿ. ಪುಟ್ಟಮಾದಯ್ಯ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದಲ್ಲದೆ ಸಂಸ್ಥೆಯ ವರದಿ ವಾಚನ ಮಾಡಿದರು.