
ಅಹಮದಾಬಾದ್,ಏ.೨೮- ಗುಜರಾತ್ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಕಮಾಲು ಮಾಡಿದೆ, ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಹಾಕಿದ್ದು, ಮತ್ತೊಮ್ಮೆ ಪಾರುಪತ್ಯೆ ಮರೆದಿದೆ.
ರಾಜ್ಯದ ೧೫ ಮಹಾನಗರ ಪಾಲಿಕೆಗಳು, ೮೪ ಪುರಸಭೆಗಳು, ೩೪ ಜಿಲ್ಲಾ ಪಂಚಾಯಿತಿಗಳು ಮತ್ತು ೨೬೦ ತಾಲೂಕು ಪಂಚಾಯಿತಿಗಳಿಗೆ ಮೊನ್ನೆ ನಡೆದ ಮತ ಎಣಿಕೆ ಬಿಗಿ ಭದ್ರತೆಯಲ್ಲಿ ನಡೆದಿದ್ದು ಬಹುತೇಕ ಕಡೆ ಕಮಲ ಅರಳಿದಿದ್ದು ಇದು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಚಿತ್ತ ಯಾವ ಕಡೆ ಇದೆ ಎನ್ನುವುದರ ಸ್ಪಷ್ಟ ನಿದರ್ಶನವಾಗಿದೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯತಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಎಣಿಕೆ ಪ್ರಾರಂಭವಾಗುವ ಮೊದಲು, ರಾಜ್ಯದ ೧೫ ಮಹಾನಗರ ಪಾಲಿಕೆಗಳಲ್ಲಿ ೪೩ ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದ್ದ ಬಿಜೆಪಿ ಆರಂಭಿಕ ಮುನ್ನಡೆ ಗಳಿಸಿತ್ತು, ಮತ ಎಣಿಕೆ ಪ್ರಕ್ರಿಯೆ ಆರಂಭವಾದ ನಂತರ ಎಲ್ಲಾ ಕಡೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವ ಕಡೆ ನಾಗಾಲೋಟ ಮುಂದುವರಿಸಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ೧೫ ಮಹಾನಗರ ಪಾಲಿಕೆಗಳಲ್ಲಿ ಮತದಾನದ ಪ್ರಮಾಣ ಶೇ. ೫೫.೧ ರಷ್ಟಿತ್ತು. ಇತರ ಸ್ಥಳೀಯ ಸಂಸ್ಥೆಗಳಿಗೆ ಮತದಾನದ ಶೇಕಡಾವಾರು ಹೆಚ್ಚಾಗಿದ್ದು, ಪುರಸಭೆಗಳು ಶೇ. ೬೫.೫೩, ಜಿಲ್ಲಾ ಪಂಚಾಯಿತಿಗಳು ಶೇ. ೬೬.೬೪ ಮತ್ತು ತಾಲೂಕು ಪಂಚಾಯಿತಿಗಳು ಶೇ. ೬೭.೨೬ ಮತದಾನ ದಾಖಲಾಗಿತ್ತು.
೧೫ ಪುರಸಭೆ ನಿಗಮಗಳು, ೮೪ ಪುರಸಭೆಗಳು, ೩೪ ಜಿಲ್ಲಾ ಪಂಚಾಯತ್‌ಗಳು ಮತ್ತು ೨೬೦ ತಾಲೂಕು ಪಂಚಾಯತ್‌ಗಳಲ್ಲಿ ಒಟ್ಟು ೯,೨೦೦ ಸ್ಥಾನಗಳನ್ನು ಒಳಗೊಂಡಂತೆ ಚುನಾವಣೆಗಳು ನಡೆದಿತ್ತು. ಈ ವ್ಯಾಪಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ೪.೧೮ ಕೋಟಿಗೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದರು.
ಮದ್ಯಾಹ್ನದ ವೇಳೆಗೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶದ ನಿಖರ ಮಾಹಿತಿ ದೊರೆಯಲಿದ್ದು ಈಗಾಗಲೇ ಬಹುತೇಕ ಕಡೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸಂಭ್ರಮಾಚಾರಣೆಯಲ್ಲಿ ತೊಡಗಿದ್ದಾರೆ.

























