
ಬೀದರ್: ಎಂಜಲ್ ಕಲ್ಚರಲ್ ಆಯಿಂಡ್ ಸೋಷಿಯಲ್ ವೆಲ್‌ಫೇರ್ ಸೋಸೈಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿಯ ಕುಂಬಾರವಾಡದ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಸಂಗೀತ ಸೌರಭವು ಸಂಗೀತ ಆಸಕ್ತರ ಮನ ತಣಿಸಿತು.
ಹಿರಿಯ ಕಲಾವಿದರಾದ ದಿಲೀಪ್ ಕಾಡವಾದ, ರೇಣುಕಾ ಎನ್.ಬಿ., ಜಸ್ಸಿ ಸೋನ್ವಾನೆ, ಮೆತೊಶಲ್ ಮಾರ್ಕ್, ವಿಜಯಲಕ್ಷ್ಮಿ, ನಂರತ, ವೈಷ್ಣವಿ, ನಾಗಶ್ರೀ, ನಾಗೇಶ, ರಾಜೇಶ್ವರಿ ಹೂಗಾರ, ಮಾನ್ಯತಾ, ಮುದ್ರಿತಾ, ಆರಾಧನಾ ಮತ್ತಿತರ ಕಲಾವಿದರು ಗಾನ ಸುಧೆ ಹರಿಸಿದರು.
ಭಾವಗೀತೆ, ಜನಪದ ಗೀತೆ, ತತ್ವಪದ, ವಚನ ಹಾಗೂ ದೇಶ ಭಕ್ತ ಗೀತೆಗಳು ಸಂಗೀತದ ರಸದೌತಣ ಉಣಬಡಿಸಿದವು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು, ಎಂಜಲ್ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಅವರು ಹಲವು ವರ್ಷಗಳಿಂದ ಕಲಾ ಸೇವೆಯಲ್ಲಿ ನಿರತರಾಗಿದ್ದಾರೆ. ಮಕ್ಕಳಿಗೆ ಸಂಗೀತ ವಿದ್ಯೆ ಧಾರೆ ಎರೆಯುತ್ತಿದ್ದಾರೆ. ಕಲೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಕಲಾವಿದ ದಿಲೀಪ್ ಕಾಡವಾದ ಮಾತನಾಡಿ, ಸಂಗೀತ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಈಚಿನ ದಿನಗಳಲ್ಲಿ ವೇದಿಕೆ ಸಮಾರಂಭಗಳಲ್ಲಿ ರಾಜಕಾರಣಿಗಳು ಹಾಗೂ ಗಣ್ಯರು ಬರುತ್ತಿದ್ದಂತೆಯೇ ಕಲಾವಿದರ ಕೈಯಲ್ಲಿನ ಮೈಕ್ ಕಸಿದು ಅವಮಾನಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ. ಇದನ್ನು ಎಲ್ಲರೂ ಖಂಡಿಸಬೇಕಾಗಿದೆ ಎಂದರು.
ಸAಗೀತ ಕಲಿಕೆಯಲ್ಲಿ ಆಸಕ್ತಿ ಹೊಂದಿರುವವರು ಸೋಷಿಯಲ್ ಮೀಡಿಯಾದಲ್ಲಿ ಕೇವಲ ಲೈಕ್‌ಗಳಿಗಾಗಿ ಸಂಗೀತ ಕಲಿಯಬಾರದು, ಗುರು-ಶಿಷ್ಯ ಪರಂಪರೆ, ಕಠಿಣ ಪರಿಶ್ರಮದೊಂದಿಗೆ ಸಂಗೀತ ವಿದ್ಯೆಯನ್ನು ಒಲಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ಜೈಕುಮಾರ ಯೇಸುದಾಸ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಎಂಜಲ್ ಕಲ್ಚರಲ್ ???ಂಡ್ ಸೋಷಿಯಲ್ ವೆಲ್‌ಫೇರ್ ಸೋಸೈಟಿ ಅಧ್ಯಕ್ಷ ಪ್ರವೀಣ್ ಜಾನ್ ಅಧ್ಯಕ್ಷತೆ ವಹಿಸಿದ್ದರು.
ಸಂತೋಷ್ ಸೋಲಾಪುರೆ, ಯೋಹಾನ್ ಶಹಾಗಂಜ್, ನವ್ಯ, ನಮ್ರತಾ, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರವೀಣ್ ಮ್ಯೂಸಿಕ್ ಅಕಾಡೆಮಿ ಮಕ್ಕಳು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ರೇಣುಕಾ ಎನ್.ಬಿ. ಸ್ವಾಗತಿಸಿದರು. ವೈಷ್ಣವಿ ನಿರೂಪಿಸಿದರು. ವಿಜಯಲಕ್ಷ್ಮಿ ವಂದಿಸಿದರು.































