
ಬೀದರ್, ಸೆ.೨೧: ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ, ಒತ್ತಡಮುಕ್ತ ಜೀವನ ಹಾಗೂ ಸಮಾಜದಲ್ಲಿ ಶಾಂತಿ-ಸೌಹಾರ್ದದ ಸಂದೇಶ ಸಾರುವ ಉದ್ದೇಶದಿಂದ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಬೀದರ್ ಶಿವಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ೭ ಕಿ.ಮೀ. ‘ಆರೋಗ್ಯಕ್ಕಾಗಿ ಓಟ, ಶಾಂತಿಗಾಗಿ ಓಟ’ ಆಧ್ಯಾತ್ಮಿಕ ಮ್ಯಾರಥಾನ್ ಭಾನುವಾರ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ಪಿಯು ಕಾಲೇಜಿನಿಂದ ಬೆಳಿಗ್ಗೆ ೭ ಗಂಟೆಗೆ ಆರಂಭವಾದ ಮ್ಯಾರಥಾನ್ಗೆ ಮಾಜಿ ಎನ್ಎಸ್ಜಿ ಕಮಾಂಡೋ ಶ್ರೀ ಗುರುಮೂರ್ತಿ ಜಿ. ಬೆಂಗಳೂರು ಚಾಲನೆ ನೀಡಿದರು. ವಿವಿಧ ವಯೋಮಾನದ ಯುವಕರು, ವಿದ್ಯಾರ್ಥಿಗಳು, ರುಹಾನಿ ಸೇನಾ ಕೆಡೆಟ್ಗಳು, ಬಿಕೆ ಸಹೋದರರು-ಸಹೋದರಿಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ೪೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು. ಓಟವು ಯದಲಾಪುರದ ರಾಜಋಷಿವನ್ ಕ್ಯಾಂಪಸ್ನ ಬ್ರಹ್ಮಾ ಕುಮಾರೀಸ್ ಕೇಂದ್ರದಲ್ಲಿ ಮುಕ್ತಾಯಗೊಂಡಿತು.
ಮೊಬೈಲ್ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಒತ್ತಡವನ್ನು ನಿಯಂತ್ರಿಸುವುದು ಹಾಗೂ ಧ್ಯಾನದ ಮೂಲಕ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಕಾಪಾಡಿಕೊಳ್ಳುವ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು. ರುಹಾನಿ ಸೇನಾ ಕೆಡೆಟ್ಗಳು ಶಿಸ್ತು ಮತ್ತು ಸೇವಾ ಮನೋಭಾವದಿಂದ ಮ್ಯಾರಥಾನ್ಗೆ ಮುನ್ನಡೆ ನೀಡಿದರು.
ಮುಂಬೈನ ಬಿ.ಕೆ. ತನುಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ಯಾನದ ಮಹತ್ವ ವಿವರಿಸಿದರು. ಸಂಗಾರೆಡ್ಡಿಯ ಬಿ.ಕೆ. ಗಂಗಾ ಬಹೆನ್ ಕಾರ್ಯಕ್ರಮ ನಿರೂಪಿಸಿದರು.
೩೦ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕ ಕಾಲೇಜಿನ ಎನ್ಸಿಸಿ ಕೆಡೆಟ್ ಸೋನಲ್ ವೀರ್ ಪ್ರಥಮ, ಬಿ.ಕೆ. ಗೌತಮ್ ದ್ವಿತೀಯ ಹಾಗೂ ರಾಕೇಶ್ ತೃತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಬಿ.ವಿ.ಬಿ. ಕಾಲೇಜಿನ ಎನ್ಸಿಸಿ ಕೆಡೆಟ್ ಅಂಜಲಿ ಪ್ರಥಮ, ಭವಾನಿ ದ್ವಿತೀಯ ಹಾಗೂ ಬಿ.ಕೆ. ಭಾಗ್ಯ ತೃತೀಯ ಸ್ಥಾನ ಗಳಿಸಿದರು.
೩೦ ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ದೀಪಕ್ ಚಂಗೂರ್, ಬಿ.ಕೆ. ಸುನಿಲ್, ಕನ್ಹಯ್ಯಾ ಹಾಗೂ ಶಾಂತನು; ಮಹಿಳಾ ವಿಭಾಗದಲ್ಲಿ ಬಿ.ಕೆ. ಚಾನಾ ಬಾಯಿ, ಬಿ.ಕೆ. ಕವಿತಾ ಹಾಗೂ ಬಿ.ಕೆ. ಸಪ್ನಾ ಬಹೆನ್ ವಿಜೇತರಾದರು.
ಬಿ.ಜಿ. ಶೆಟಕಾರ, ಶಿವರಾಜ್ ಪಾಟೀಲ್, ಸಂತೋಷ್ ಪಾಟೀಲ್, ಕರ್ನಲ್ ಮನೋಜ್, ಬಿ.ಕೆ. ಸುಮಂಗಲಾ ಬಹೆನ್, ಬಿ.ಕೆ. ಸುನಂದಾ ಬಹೆನ್ ಹಾಗೂ ಡಾ. ಸ್ವಾಮಿನಾಥನ್ ಅವರು ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು. ಎಲ್ಲ ಭಾಗವಹಿಸಿದವರಿಗೂ ಪ್ರಮಾಣಪತ್ರ ಹಾಗೂ ಉಡುಗೊರೆ ನೀಡಲಾಯಿತು.
ಬ್ರಹ್ಮಾ ಕುಮಾರೀಸ್ ರಾಮಪುರ ಕಾಲೊನಿಯ ಹಿರಿಯ ಅನುಯಾಯಿಗಳಾದ ಪಿ.ವಿ. ಪಾಟೀಲ್, ಕೊಂಡ ಕಾಶಿನಾಥ, ಬಾಬುರೆಡ್ಡಿ ಚೂಡೆ, ದೇವೇಂದ್ರ ಪಾಖಲ್, ಶಿವರಾಜ ಕಲ್ವೇಟಿ, ಮತಿವಂತ ಭಾಯಿ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸ್ವಯಂಸೇವಕರ ಸಹಕಾರಕ್ಕೆ ಶಿವಶಕ್ತಿ ಭವನ ಕೇಂದ್ರದಿAದ ಕೃತಜ್ಞತೆ ಸಲ್ಲಿಸಲಾಯಿತು.































