Home ಜಿಲ್ಲೆ ಕಲಬುರಗಿ ಭೂ ಗ್ಯಾರಂಟಿ ಯೋಜನೆಯಡಿ “ಇ-ಸ್ವತ್ತು ಅಭಿಯಾನ”:ಸಾರ್ವಜನಿಕರು ಸಿಬ್ಬಂದಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಿ

ಭೂ ಗ್ಯಾರಂಟಿ ಯೋಜನೆಯಡಿ “ಇ-ಸ್ವತ್ತು ಅಭಿಯಾನ”:ಸಾರ್ವಜನಿಕರು ಸಿಬ್ಬಂದಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಿ

ಕಲಬುರಗಿ,ನ.19:”ಭೂ ಗ್ಯಾರಂಟಿ” ಯೋಜನೆಯಡಿ ತಮ್ಮ ಗ್ರಾಮಠಾಣಾ ಆಸ್ತಿಗಳಿಗೆ “ಇ-ಸ್ವತ್ತು” ಮಾಡಿಸಲು ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಈ ಕೆಳಕಂಡ ಅಗತ್ಯ ದಾಖಲೆಗಳನ್ನು ನೀಡಿ ಈ ಅಭಿಯಾನದ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.

ಗ್ರಾಮಠಾಣಾ ಆಸ್ತಿಗಳಿಗೆ “ಇ-ಸ್ವತ್ತು” ಮಾಡಿಸಲು ನೀಡಬೇಕಾದ ದಾಖಲೆಗಳ ವಿವರ ಇಂತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ದಿನಾಂಕ: 07-04-2025 ಕ್ಕಿಂತ ಹಿಂದಿನ ವಿದ್ಯುತ್ ಬಿಲ್, ಆಸ್ತಿಯ ಮಾಲೀಕರ ಆಧಾರ್ ಕಾರ್ಡ್ ಪ್ರತಿ, ಇ-ಕೆವೈಸಿ (e-ಏಙಅ) ಪರಿಶೀಲನೆಗಾಗಿ ಆಸ್ತಿಯ ಮಾಲೀಕರ ಆಧಾರ್‍ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಆಸ್ತಿಯ ಇತ್ತೀಚಿನ ಛಾಯಾಚಿತ್ರ ಹಾಗೂ ಪ್ರಸ್ತುತ ಆಸ್ತಿ ದಾಖಲೆ (P2) ಯಲ್ಲಿ ತಂದೆಯ ಹೆಸರು ಇದ್ದು, ಅವರ ಮಗ ಅಥವಾ ಮಗಳು ವಾರಸುದಾರಿಕೆಯ ಆಧಾರದ ಮೇಲೆ ಇ-ಖಾತಾಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಂದೆಯ ಮರಣ ಪ್ರಮಾಣಪತ್ರ ಹಾಗೂ ವಾರಸುದಾರಿಕೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ಬಾಗಿಲಿಗೆ ಬರುವ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿಗದಿತ ದಾಖಲೆಗಳನ್ನು ನೀಡಿ ಸಹಕರಿಸಬೇಕೆಂದು ತಿಳಿಸಿದ್ದಾರೆ.