
ನವದೆಹಲಿ, ನ.೧೪: ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆ, ಧರಣಿ, ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳಿಗೆ ನಿಯಂತ್ರಣ ಹೇರುವ ಉದ್ದೇಶದಿಂದ ದೆಹಲಿ ಪೊಲೀಸರು ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಿದ್ದಾರೆ. ಇದರ ಪ್ರಕಾರ, ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಗರಿಷ್ಠ ೫೦ ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲು ಪ್ರಸ್ತಾಪಿಸಲಾಗಿದೆ. ಅಲ್ಲದೆ, ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಮಾತ್ರ ಕಾರ್ಯಕ್ರಮ ನಡೆಸಲು ಸಮಯ ನಿಗದಿಪಡಿಸಲಾಗಿದೆ.
ಜಂತರ್ ಮಂತರ್ ಅನ್ನು ಪ್ರತಿಭಟನೆಗೆ ಮೀಸಲಾದ ಸ್ಥಳಗಳ ಪಟ್ಟಿಯಿಂದ ಅಕ್ಟೋಬರ್ನಲ್ಲಿ ಕೈಬಿಟ್ಟ ಬಳಿಕ, ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಪರ್ಯಾಯ ಪ್ರತಿಭಟನಾ ಸ್ಥಳಗಳಾಗಿ ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ ಜನಸಂದಣಿ ನಿಯಂತ್ರಣ, ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಪೊಲೀಸರು ಹೊಸ ಮಾರ್ಗಸೂಚಿ ಸಿದ್ಧಪಡಿಸಿದ್ದಾರೆ.
ಕರಡು ಎಸ್ಒಪಿ ಪ್ರಕಾರ, ೫೦ ಸಾವಿರಕ್ಕಿಂತ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ. ಆದರೆ, ಪ್ರತಿಯೊಂದು ಕಾರ್ಯಕ್ರಮದ ಸ್ವರೂಪ, ನಿರೀಕ್ಷಿತ ಜನಸಂಖ್ಯೆ ಮತ್ತು ಲಭ್ಯವಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ನಿಖರವಾದ ಜನಸಂಖ್ಯೆಯನ್ನು ನಿರ್ಧರಿಸಲಿದ್ದಾರೆ.
ಕಾರ್ಯಕ್ರಮ ಆಯೋಜಕರು ಮೊದಲು ದೆಹಲಿ ಮಹಾನಗರ ಪಾಲಿಕೆಯಿಂದ (ಎಂಸಿಡಿ) ಮೈದಾನದ ಲಭ್ಯತೆ ಕುರಿತು ಅನುಮತಿ ಪಡೆಯಬೇಕು. ನಂತರ ಪೊಲೀಸ್ ಇಲಾಖೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯವಾಗಿ ಕಾರ್ಯಕ್ರಮ ನಡೆಯುವ ಕನಿಷ್ಠ ೧೦ ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಲಿದೆ.
ಜನಸಂದಣಿ ನಿರ್ವಹಣೆ, ಸಂಚಾರ ನಿಯಂತ್ರಣ, ವಾಹನ ನಿಲುಗಡೆ ಹಾಗೂ ಜನರನ್ನು ಇಳಿಸಲು ಮತ್ತು ಹತ್ತಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸುವ ಜವಾಬ್ದಾರಿ ಆಯೋಜಕರದ್ದಾಗಿರುತ್ತದೆ. ರಸ್ತೆಗಳು ಮತ್ತು ತುರ್ತು ವಾಹನಗಳ ಸಂಚಾರ ಮಾರ್ಗಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಕರಡಿನಲ್ಲಿ ಸೂಚಿಸಲಾಗಿದೆ.
ಭದ್ರತೆಯ ದೃಷ್ಟಿಯಿಂದ ಬಂದೂಕು, ಕತ್ತಿ, ಈಟಿ, ಹರಿತವಾದ ಆಯುಧಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ಮೈದಾನದೊಳಗೆ ತರುವುದನ್ನು ನಿರ್ಬಂಧಿಸಲಾಗಿದೆ. ಮೈದಾನದ ಸುತ್ತಮುತ್ತ ಡ್ರೋನ್ ಹಾರಿಸಲು ಕೂಡ ಪೂರ್ವಾನುಮತಿ ಪಡೆಯಬೇಕಾಗುತ್ತದೆ.
ಇದಲ್ಲದೆ, ಕಾರ್ಯಕ್ರಮಗಳಿಗೆ ಆಗಮಿಸುವ ಜನರಿಗೆ ಕುಡಿಯುವ ನೀರು, ವೈದ್ಯಕೀಯ ನೆರವು, ಶೌಚಾಲಯ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕಲ್ಪಿಸುವುದನ್ನೂ ಆಯೋಜಕರು ಖಚಿತಪಡಿಸಬೇಕು.
ಹೊಸ ಎಸ್ಒಪಿ ಕರಡನ್ನು ಅನುಮೋದನೆಗಾಗಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಸದ್ಯ ಇದು ಪ್ರಾಥಮಿಕ ಹಂತದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆ ಮತ್ತು ಅನುಮೋದನೆ ಬಳಿಕ ಅಂತಿಮ ಮಾರ್ಗಸೂಚಿ ಜಾರಿಗೆ ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





















