
ಕೆಜಿಎಫ್, ನ. ೧೩- ನಗರಸಭೆ ಪೌರ ಕಾರ್ಮಿಕರ ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಂಘಟನೆಯೊಳಗೆ ಉಂಟಾಗಿರುವ ಭಿನ್ನಾಭಿಪ್ರಾಯ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ, ಪೌರ ಕಾರ್ಮಿಕರ ಸಂಘವು ಎರಡು ಬಣಗಳಾಗಿ ವಿಭಜನೆಯಾಗಿದೆ. ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಅವರ ನೇತೃತ್ವದ ಸಂಘಟನೆಯಲ್ಲಿದ್ದ ಹಲವಾರು ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿ, ರಾಜಾ ಅವರ ನೇತೃತ್ವದಲ್ಲಿ ಹೊಸ ಸಂಘಟನೆಯನ್ನು ರಚಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೊಸ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜಾ, ನಗರಸಭೆಯ ಪೌರ ಕಾರ್ಮಿಕರು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು, ಹಕ್ಕುಗಳು ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಂಘಟನೆಯ ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಅವರ ಗಮನಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟಕ್ಕೆ ಮುಂದಾಗುವಂತೆ ಒತ್ತಾಯಿಸಲಾಯಿತು. ಆದರೆ ನಮ್ಮ ಮನವಿಗಳಿಗೆ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ಆರೋಪಿಸಿದರು.
ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆ ಮುಂದಿನ ಚುನಾವಣೆಯಲ್ಲಿ ನಿಂತು ಹೋರಾಟ ನಡೆಸಬೇಕಾಗಿತ್ತು. ಆದರೆ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮುಂದಾದಾಗ ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದ್ದಿತು. ಇದರಿಂದ ಸಂಘಟನೆಯ ಪದಾಧಿಕಾರಿಗಳಲ್ಲಿ ತೀವ್ರ ಅಸಮಾಧಾನ ಉಂಟಾಯಿತು. ಹಾಗಾಗಿ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ, ಒಮ್ಮತದ ನಿರ್ಧಾರದ ಮೇರೆಗೆ ಹಳೆಯ ಸಂಘಟನೆಯಲ್ಲಿನ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ, ಪ್ರಭಾಕರ ನೇತೃತ್ವದ ಸಂಘಟನೆ ಜೊತೆ ಸೇರ್ಪಡೆಗೊಂಡು ಹೊಸ ಸಂಘಟನೆಯನ್ನು ರಚಿಸಿಕೊಳ್ಳಲಾಗಿದೆ. ಕೋಲಾರ್ ಜಿಲ್ಲಾಧ್ಯಕ್ಷರಾಗಿ ಬಿ.ಎನ್. ವೆಂಕಟೇಶ್ ಆಯ್ಕೆಯಾಗಿದ್ದು, ಕೆಜಿಎಫ್ ತಾಲ್ಲೂಕು ಪೌರ ಕಾರ್ಮಿಕರ ಅಧ್ಯಕ್ಷರಾಗಿಯಾಗಿ ತಾವು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ತಿಳಿಸಿದರು.
ಪೌರ ಕಾರ್ಮಿಕರು ನಗರ ಸ್ವಚ್ಛತೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದು, ಅವರ ಸೇವೆಗೆ ತಕ್ಕ ಗೌರವ, ಸೌಲಭ್ಯ ಹಾಗೂ ಹಕ್ಕುಗಳು ದೊರೆಯಬೇಕು. ಆದರೆ ಕಾರ್ಮಿಕರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಲ್ಲಿ ಸಂಘಟನೆ ಫಲಿತಾಂಶಕಾರಿ ಕಾರ್ಯ ನಿರ್ವಹಿಸಬೇಕಿತ್ತು. ಈ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಹಳೆಯ ಸಂಘಟನೆಯಿಂದ ಹೊರಬರಬೇಕಾದ ಅನಿವಾರ್ಯತೆ ಎದುರಾಯಿತು ಎಂದು ರಾಜಾ ಹೇಳಿದರು. ಒಟ್ಟಾರೆ, ಪೌರ ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಕಾರ್ಯ ನಿರ್ವಹಿಸಬೇಕಾದ ಸಂಘಟನೆಯಲ್ಲಿಯೇ ಭಿನ್ನಾಭಿಪ್ರಾಯ ಸ್ಪೋಟಗೊಂಡು ವಿಭಜನೆಯಾಗಿರುವುದು ಕಾರ್ಮಿಕರ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟೋಡಿಸಿದೆ. ಮುಂದಿನ ದಿನಗಳಲ್ಲಿ ಹೊಸ ಸಂಘಟನೆ ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಯಾವ ರೀತಿಯಲ್ಲಿ ಹೋರಾಟ ರೂಪಿಸುತ್ತದೆಂಬುದನ್ನು ಕಾದು ನೋಡಬೇಕಾಗಿದೆ.























