Home ಜಿಲ್ಲೆ ನೀರಾವರಿ ಯೋಜನೆಗಳಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಗ್ಗಿದೆ: ಎಂ. ಬಿ. ಪಾಟೀಲ

ನೀರಾವರಿ ಯೋಜನೆಗಳಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಗ್ಗಿದೆ: ಎಂ. ಬಿ. ಪಾಟೀಲ

ವಿಜಯಪುರ, ಅ. 22: ರಾಜ್ಯದ ಹಲವೆಡೆ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿ ಎದುರಾಗಿದ್ದರೂ, ವಿಜಯಪುರ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ನೀರಾವರಿ ಯೋಜನೆಗಳಿಂದ ನೀರಿನ ಸಮಸ್ಯೆ ಸಾಕಷ್ಟು ತಗ್ಗಿದೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೂಪರ್ ಎಲ್‍ನಿನೋ ಪರಿಣಾಮದಿಂದಾಗಿ ಮಳೆಯ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಲಭ್ಯವಿರುವ ನೀರನ್ನು ಪ್ರತಿಯೊಬ್ಬರೂ ಮಿತವಾಗಿ ಬಳಸಬೇಕು. ಜಲಸಂಪನ್ಮೂಲಗಳ ಸಂರಕ್ಷಣೆಗೆ ಜನರು ಸಹಕರಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಹಲವು ವರ್ಷಗಳ ಬಳಿಕ ಸಂಗಾಪುರ ಎಸ್.ಎಚ್. ಗ್ರಾಮದ ದೇವಿ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದ ಅವರು, ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ದುರ್ಗಾದೇವಿ ಎಲ್ಲರಿಗೂ ಆಶೀರ್ವದಿಸಿ, ಬರದ ಪರಿಸ್ಥಿತಿ ದೂರವಾಗಲಿ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ರೈತರು ಹಾಗೂ ಜನತೆ ಸಮೃದ್ಧಿಯಿಂದ ಬದುಕುವಂತಾಗಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲು ದಳವಾಯಿ, ಜಿ.ಪಂ. ಮಾಜಿ ಸದಸ್ಯ ಮುತ್ತಪ್ಪ ಶಿವಣ್ಣವರ, ತಾ.ಪಂ. ಮಾಜಿ ಸದಸ್ಯ ರಮೇಶ ಬಡ್ರಿ, ಮುಖಂಡರಾದ ಮುತ್ತು ಮಾದರ, ಶಿವಪ್ಪ ಪೂಜಾರಿ, ಅಶೋಕ ಮಾದರ, ರಾಮನಿಂಗ ಕೊಕಟನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.