
ಚಿಂಚೋಳಿ: ಪಟ್ಟಣದ ಅಂಬಾ ಭವಾನಿ ಮಂದಿರ ಹಾಗೂ ಚಂದಾಪುರದ ಭವಾನಿ ಮಂದಿರದಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ದಸರಾ ಹಬ್ಬದ ಅಂಗವಾಗಿ ಚಿಂಚೋಳಿ ಪಟ್ಟಣದ ಹಳೆಯ ಎಸ್ಬಿಐ ಬ್ಯಾಂಕ್ ಸಮೀಪದಲ್ಲಿರುವ ಡೋರ ಸಮಾಜದ ವತಿಯಿಂದ ಅಂಬಾ ಭವಾನಿ ಮಂದಿರದಲ್ಲಿ ಒಂಬತ್ತು ದಿನಗಳ ಕಾಲ ಭವಾನಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಬುಧವಾರ ಸಂಜೆ ದಸರಾ ಹಬ್ಬದ ಅಂಗವಾಗಿ ಭವಾನಿ ದೇವಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ಚಿಂಚೋಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಡೋರ ಸಮಾಜದ ಮಹಿಳೆಯರು ಹಾಗೂ ಪುರುಷರು ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಪಾಲ್ಗೊಂಡರು. ಭಕ್ತರು ಭವಾನಿ ದೇವಿಯ ಜಯಘೋಷಗಳನ್ನು ಮೊಳಗಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕರು ಹಾಗೂ ಭಕ್ತಾದಿಗಳು ಅಂಬಾ ಭವಾನಿ ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು. ದೇವಾಲಯದ ವತಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಪ್ರಸಾದ ಸ್ವೀಕರಿಸಿದರು.























