Home ಮುಖಪುಟ ಸುದ್ದಿ ನ. ೧ರಿಂದ ಆಸ್ಪತ್ರೆಗಳಲ್ಲಿ ದರ ಪಟ್ಟಿ ಪ್ರದರ್ಶನ ಕಡ್ಡಾಯ

ನ. ೧ರಿಂದ ಆಸ್ಪತ್ರೆಗಳಲ್ಲಿ ದರ ಪಟ್ಟಿ ಪ್ರದರ್ಶನ ಕಡ್ಡಾಯ

ಬೆಂಗಳೂರು,ಅ.೨೨- ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಬಿಲ್ ಕಂಡರೆ ಸಾಕು, ಎಷ್ಟು ಹಣ ಯಾವುದಕ್ಕೆ ಪಾವತಿಸಬೇಕು ಎಂಬ ಗೊಂದಲ ಎದುರಾಗುತ್ತದೆ. ಚಿಕಿತ್ಸಾ ವೆಚ್ಚದ ಜತೆಗೆ ಔಷಧಗಳು, ಸ್ಟೆಂಟ್‌ಗಳು ಹಾಗೂ ವೈದ್ಯಕೀಯ ಉಪಕರಣಗಳ ಹೆಸರಿನಲ್ಲಿ ವಿಧಿಸುವ ದರಗಳ ಬಗ್ಗೆ ಬಹುತೇಕ ರೋಗಿಗಳಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಈ ಗೊಂದಲಕ್ಕೆ ತೆರೆ ಎಳೆದು ಆಸ್ಪತ್ರೆಗಳ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆರೋಗ್ಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ.


ನವೆಂಬರ್ ೧ರಿಂದ ರಾಜ್ಯದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆಗಳ ಅಧಿಕೃತ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವಾಗಲಿದೆ. ಇದರ ಜತೆಗೆ ರೋಗಿಗಳಿಗೆ ನೀಡುವ ಔಷಧಗಳ ಬಿಲ್‌ನಲ್ಲಿ ಆಸ್ಪತ್ರೆಗಳು ಔಷಧವನ್ನು ಖರೀದಿಸಿದ ಬೆಲೆ ಮತ್ತು ಅದರ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಎರಡನ್ನೂ ನಮೂದಿಸಬೇಕು ಎಂದು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯ ಈ ಕ್ರಮದಿಂದ ಚಿಕಿತ್ಸಾ ವೆಚ್ಚದ ಜತೆಗೆ ಔಷಧಗಳ ದರವನ್ನೂ ರೋಗಿಗಳು ಪರಿಶೀಲಿಸಲು ಅವಕಾಶ ಸಿಗಲಿದೆ.

ಚಿಕಿತ್ಸೆಗಳ ದರಪಟ್ಟಿ ಪ್ರದರ್ಶನ ಕಡ್ಡಾಯ:


ಆಸ್ಪತ್ರೆಗಳಲ್ಲಿ ಯಾವೆಲ್ಲ ಚಿಕಿತ್ಸೆಗಳು ಲಭ್ಯವಿವೆ ಮತ್ತು ಪ್ರತಿಯೊಂದು ಚಿಕಿತ್ಸೆಗೆ ಎಷ್ಟು ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ರೋಗಿಗಳಿಗೆ ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ದರಪಟ್ಟಿ ಪ್ರದರ್ಶನಕ್ಕೆ ಸೂಚಿಸಲಾಗಿದೆ. ಆಸ್ಪತ್ರೆಗಳ ನೋಂದಣಿ ಕೌಂಟರ್ ಸೇರಿದಂತೆ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವ ಸ್ಥಳದಲ್ಲಿ ಚಿಕಿತ್ಸೆಗಳ ವಿವರ ಹಾಗೂ ಅಧಿಕೃತ ದರಗಳನ್ನು ಪ್ರದರ್ಶಿಸಬೇಕು. ನವೆಂಬರ್ ೧ರಿಂದಲೇ ಈ ನಿಯಮವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಇದರಿಂದ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ರೋಗಿಗಳು ವೆಚ್ಚದ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಲಿದೆ. ಚಿಕಿತ್ಸೆಯ ಹೆಸರಿನಲ್ಲಿ ಅನಿರೀಕ್ಷಿತವಾಗಿ ಹೆಚ್ಚುವರಿ ಮೊತ್ತ ವಿಧಿಸುವುದನ್ನು ತಡೆಯಲು ಹಾಗೂ ಆಸ್ಪತ್ರೆಗಳ ದರ ನಿಗದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮ ನೆರವಾಗುವ ನಿರೀಕ್ಷೆಯಿದೆ.

ಆಸ್ಪತ್ರೆಗಳು ಔಷಧಗಳನ್ನು ಎಷ್ಟು ಬೆಲೆಗೆ ಖರೀದಿಸುತ್ತವೆ ಮತ್ತು ರೋಗಿಗಳಿಗೆ ಎಷ್ಟು ಬೆಲೆಗೆ ಮಾರಾಟ ಮಾಡುತ್ತವೆ ಎಂಬ ಮಾಹಿತಿ ಇನ್ನು ಬಿಲ್‌ನಲ್ಲೇ ಲಭ್ಯವಾಗಬೇಕಿದೆ. ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಪ್ರತಿಯೊಂದು ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ಸಂಖ್ಯೆ, ತಯಾರಿಕೆ ದಿನಾಂಕ, ಎಕ್ಸ್‌ಪೈರಿ ದಿನಾಂಕ, ಆಸ್ಪತ್ರೆಯ ಖರೀದಿ ಬೆಲೆ, ಎಂಆರ್‌ಪಿ ಹಾಗೂ ಅನ್ವಯವಾಗುವ ತೆರಿಗೆಗಳ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸುವಂತೆ ಸೂಚಿಸಲಾಗಿದೆ.
ಕೇವಲ ಔಷಧಗಳಿಗೆ ಸೀಮಿತವಾಗದೆ, ವೈದ್ಯಕೀಯ ಉಪಕರಣಗಳು, ಸ್ಟೆಂಟ್‌ಗಳು ಹಾಗೂ ಬಳಸಿ ಬಿಸಾಡುವ ವೈದ್ಯಕೀಯ ಸಾಮಗ್ರಿಗಳ ಬಿಲ್ಲಿಂಗ್‌ನಲ್ಲೂ ಪಾರದರ್ಶಕತೆ ಕಾಪಾಡಲು ಸೂಚಿಸಲಾಗಿದೆ. ಇದರಿಂದ ರೋಗಿಗಳು ತಮಗೆ ವಿಧಿಸಿರುವ ದರವನ್ನು ಪರಿಶೀಲಿಸಬಹುದು. ಔಷಧದ ಖರೀದಿ ಬೆಲೆ ಮತ್ತು ಮಾರಾಟದ ದರದ ನಡುವಿನ ವ್ಯತ್ಯಾಸವನ್ನೂ ಅರ್ಥಮಾಡಿಕೊಳ್ಳಲು ಅನುಕೂಲವಾಗಲಿದೆ.

ಮೂರು ವರ್ಷ ದಾಖಲೆ ಸಂರಕ್ಷಣೆ:


ಔಷಧಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳ ಸಂರಕ್ಷಣೆಗೂ ಆರೋಗ್ಯ ಇಲಾಖೆ ಒತ್ತು ನೀಡಿದೆ. ಔಷಧಗಳ ಖರೀದಿ ಇನ್‌ವಾಯ್ಸ್‌ಗಳು, ಖರೀದಿ ದರ ಹಾಗೂ ಬಿಲ್ಲಿಂಗ್ ದಾಖಲೆಗಳನ್ನು ಕನಿಷ್ಠ ಮೂರು ವರ್ಷಗಳ ಕಾಲ ಸಂರಕ್ಷಿಸಬೇಕು. ಅಗತ್ಯವಿದ್ದಾಗ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲಿಸಲು ಅವಕಾಶವಿರಲಿದೆ.
ನಿಯಮಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು, ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳ ಮೇಲ್ವಿಚಾರಣೆ ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಪ್ರಮುಖವಾಗಲಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಪ್ರಕಾರ, ಈ ಸೂಚನೆಗಳು ರಾಜ್ಯದ ಸರ್ಕಾರಿ, ಖಾಸಗಿ ಹಾಗೂ ಟ್ರಸ್ಟ್ ಆಸ್ಪತ್ರೆಗಳಿಗೆ ಅನ್ವಯಿಸಲಿವೆ.

ಖಾಸಗಿ ಆಸ್ಪತ್ರೆಗಳಿಂದ ವಿರೋಧ:


ರೋಗಿಗಳಿಗೆ ಚಿಕಿತ್ಸೆಯ ವೆಚ್ಚದ ಬಗ್ಗೆ ಮುಂಚಿತವಾಗಿ ಮಾಹಿತಿ ದೊರೆಯಬೇಕು, ಔಷಧಗಳ ದರದ ಬಗ್ಗೆ ಸ್ಪಷ್ಟತೆ ಇರಬೇಕು ಹಾಗೂ ಬಿಲ್ಲಿಂಗ್‌ನಲ್ಲಿ ಅನಗತ್ಯ ಗೊಂದಲಗಳಿಗೆ ಅವಕಾಶ ಇರಬಾರದು ಎಂಬುದು ಸರ್ಕಾರದ ಕ್ರಮದ ಉದ್ದೇಶ. ಆದರೆ, ಹೊಸ ನಿಯಮಗಳಿಗೆ ಖಾಸಗಿ ಆಸ್ಪತ್ರೆಗಳ ವಲಯದಿಂದ ಆರಂಭದಲ್ಲೇ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನಿಯಮಗಳ ಅನುಷ್ಠಾನ ಹೇಗೆ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ನವೆಂಬರ್ ೧ರಿಂದ ನಿಯಮ ಜಾರಿಯಾದ ಬಳಿಕ ಆಸ್ಪತ್ರೆಗಳು ಸೂಚನೆಗಳನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಮತ್ತು ಉಲ್ಲಂಘನೆ ಕಂಡುಬಂದರೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಈ ವ್ಯವಸ್ಥೆಯ ಪರಿಣಾಮಕಾರಿತ್ವ ಅವಲಂಬಿತವಾಗಿದೆ.