Home ಮುಖಪುಟ ಸುದ್ದಿ ದಲಿತ ಮಂತ್ರಿಗಳನ್ನ ತಡೆದಿರುವುದು ಅಪಮಾನ

ದಲಿತ ಮಂತ್ರಿಗಳನ್ನ ತಡೆದಿರುವುದು ಅಪಮಾನ

ಬೆಂಗಳೂರು, ಅ. ೨೨- ದಸರಾ ಜಂಬೂಸವಾರಿ ಸಂದರ್ಭದಲ್ಲಿ ಪೊಲೀಸರು ಕೆಲಸ ಸಚಿವರನ್ನು ತಡೆದ ಬಗ್ಗೆ ಕಿಡಿ ಕಾರಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಂತ್ರಿಗಳಿಗಿಂತ ಅಧಿಕಾರಿ ದೊಡ್ಡವರೇ ಅದರಲ್ಲೂ ದಲಿತ ಮಂತ್ರಿಗಳನ್ನು ತಡೆದಿರುವುದು ಉದ್ದೇಶ ಏನು ಈ ಘಟನೆ ಅಪಮಾನಕರ ಎಂದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವರಿಗಿಂತ ಅಧಿಕಾರಿ ದೊಡ್ಡವರೇ
ನಿನ್ನೆ ಮೈಸೂರಿನಲ್ಲಿ ದಸರಾ ಉತ್ಸವ ಇತ್ತು. ಮುಖ್ಯಮಂತ್ರಿಗಳು ನಡೆದು ಹೋಗ್ತಿದ್ದರು. ಆ ಸಂದರ್ಭದಲ್ಲಿ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ, ಬಸವಂತಪ್ಪ ಈ ಮೂರು ಸಚಿವರು ಅವರ ಹಿಂದೆಯಿದ್ದರು. ಇವರೆಲ್ಲರೂ ದಲಿತರು. ಮುಖ್ಯಮಂತ್ರಿ ಮುಂದೆ ಹೋದ ತಕ್ಷಣ ಒಬ್ಬ ಪೊಲೀಸ್ ಅಧಿಕಾರಿ, ಮಂತ್ರಿಗಳನ್ನೇ ತಡೀತಾರೆ. ಅಂದ್ರೆ ಮಂತ್ರಿಗಳಿಗಿಂತ, ಸರ್ಕಾರಕ್ಕಿಂತ ಅಧಿಕಾರಿ ದೊಡ್ಡವರಾ ಎಂದು ಕೇಳಿದರು.


ತಡೆದಮೇಲೆ ಇವರ ಕಿರುಚಾಟ ನೋಡಿ ಮುಖ್ಯಮಂತ್ರಿಯವರು ವಾಪಸ್ ಹಿಂದೆ ನೋಡಿದ್ದಾರೆ. ಇವರು ಕಿರುಚಲಿಲ್ಲ ಅಂದ್ರೆ ಅವರು ಅದನ್ನು ನೋಡ್ತಿರಲಿಲ್ಲ, ಮುಖ್ಯಮಂತ್ರಿ ಒಬ್ಬರು ಮಂತ್ರಿಗಳನ್ನು ’ಬಿಡಿ’ ಅಂತ ಅವರು ಬಂದು ಶಿಫಾರಸು ಮಾಡಬೇಕೇ ಎಂದು ಕೇಳಿದರು. ಈ ಸರ್ಕಾರ ಅಷ್ಟು ದುರ್ಬಲ ಸರ್ಕಾರನಾ ಅಥವಾ ಮುಖ್ಯಮಂತ್ರಿಗಳು ದುರ್ಬಲರೇ ಅಥವಾ ಮಂತ್ರಿಗಳು ದುರ್ಬಲರೇ? ಅಥವಾ ದಲಿತ ಮಂತ್ರಿಗಳು ಅವರು, ಬಿಡಬಾರದು ಅಂತೇನಾದ್ರೂ ಸರ್ಕಾರದ ಉದ್ದೇಶ ಇತ್ತಾ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಅಧಿಕಾರಿಗೆ ಅವರು ದಲಿತರು ಅವರನ್ನು ಬಿಡಬೇಡಿ ಅಂತೇನಾದ್ರೂ ಯಾರಾದ್ರೂ ಆದೇಶ ಮಾಡಿದ್ರಾ ಅಥವಾ ಮುಖ್ಯಮಂತ್ರಿಗಳು ಸೂಚಿಸಿದ್ದರೇ ಅದಕ್ಕೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದು ಅಪಮಾನಕರ ಸಂಗತಿ ಎಂದು ಖಂಡಿಸಿದರು.

ರಾಜ್ಯದ ಜನತೆಗೆ ಮಾಡಿದ ಅಪಮಾನ..
ಪ್ರಶ್ನೆಗೆ ಉತ್ತರಿಸಿದ ಅವರು, ಇದು ಇಡೀ ರಾಜ್ಯದ ಜನತೆಗೆ ಮಾಡಿರತಕ್ಕಂತ ಅಪಮಾನ. ವಿಶೇಷವಾಗಿ ದಲಿತ ಸಮುದಾಯಕ್ಕೆ, ಯಾಕಂದ್ರೆ ಮೂವರೂ ದಲಿತರೇ ಆಗಿದ್ದಾರೆ. ಆದ್ದರಿಂದ ಅನುಮಾನ ಬರುತ್ತದೆ. ಈ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಅಂತ ನಾನು ಸಾವಿರ ಬಾರಿ ಹೇಳಿದ್ದೀನಿ. ಇದು ಈಗಲೂ ಕೂಡ ರುಜುವಾತಾಗಿದೆ ಎಂದು ತಿಳಿಸಿದರು.