
ತಡಕಲ್: “ತಾಯಿಯ ಸ್ಮರಣಾರ್ಥ ಭವ್ಯ ಮಂದಿರ ನಿರ್ಮಿಸಿರುವುದು ಶ್ಲಾಘನೀಯ. ಅಂಬವ್ವಾ ಅವರ ನೆನಪಿನಲ್ಲಿ ತಾಯಿಯ ಕುರಿತ ಲೇಖನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದಾಗಿರುವುದು ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯಾಗಲಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ತಾಯಿ ಅಂಬಾಭವಾನಿ ದೇವಿಯು ಸುಭಾಷ್ ಗುತ್ತೇದಾರ ಅವರಿಗೆ ಶಕ್ತಿ ಮತ್ತು ಆಶೀರ್ವಾದ ನೀಡಲಿ” ಎಂದು ಲೇಖಕ, ಚಿತ್ರಕಲಾವಿದ ಹಾಗೂ ಛಾಯಾಗ್ರಾಹಕ ವೀರಶೆಟ್ಟಿ ಎಂ. ಪಾಟೀಲ ಹಾರೈಸಿದರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಅಕ್ಟೋಬರ್ ೨೦ರಂದು ನಡೆದ ಶ್ರೀ ಅಂಬಾಭವಾನಿ ದೇವಿಯ ಪ್ರಥಮ ಜಾತ್ರೆ ಹಾಗೂ ದಸರಾ ಮಹೋತ್ಸವದ ಅಂಗವಾಗಿ, ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರ ತಾಯಿ ಅಂಬವ್ವಾ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಲೇಖನ ಸ್ಪರ್ಧೆಯಲ್ಲಿ ವೀರಶೆಟ್ಟಿ ಪಾಟೀಲರು ಪ್ರಥಮ ಬಹುಮಾನ ಪಡೆದರು.
ಅವರು ಬರೆದ ‘ಅಮ್ಮ – ತನ್ನ ಕನಸುಗಳ ಚಿತಾಭಸ್ಮದಲ್ಲಿ ಮಕ್ಕಳ ಭವಿಷ್ಯಕ್ಕೆ ದೀಪ ಹಚ್ಚಿದ ಮಹಾತಾಯಿ!’ ಎಂಬ ಲೇಖನಕ್ಕೆ ‘ಅಂಬವ್ವಾ ಮಾತೃರತ್ನ ಪ್ರಶಸ್ತಿ’ ಹಾಗೂ ೨೧,೦೦೦ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೀರಶೆಟ್ಟಿ ಪಾಟೀಲರು, ತಮ್ಮ ಸಾಹಿತ್ಯ, ಚಿತ್ರಕಲೆ ಹಾಗೂ ಛಾಯಾಗ್ರಹಣ ಕ್ಷೇತ್ರದ ಸಾಧನೆಗಳನ್ನು ಉಲ್ಲೇಖಿಸದೆ ಲೇಖನವನ್ನು ಸ್ಪರ್ಧೆಗೆ ಕಳುಹಿಸಿದ್ದಾಗಿ ತಿಳಿಸಿದರು. ಲೇಖನದ ಆಶಯ ಮತ್ತು ಸಾಹಿತ್ಯಿಕ ಮೌಲ್ಯವನ್ನು ಗುರುತಿಸಿ ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಿದ ಆಯೋಜಕರ ಕಾರ್ಯವನ್ನು ಮೆಚ್ಚಿಕೊಂಡರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ೧೬ ಪುಸ್ತಕಗಳನ್ನು ಪ್ರಕಟಿಸಿದ್ದು, ಚಿತ್ರಕಲೆ ಮತ್ತು ಛಾಯಾಗ್ರಹಣ ಕ್ಷೇತ್ರಗಳಲ್ಲಿ ೫೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ನಂದಗಾAವದ ರಾಜಶೇಖರ ಸ್ವಾಮೀಜಿ ಹಾಗೂ ಮಾಡಿಯಾಳದ ಮರುಳಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಹಾಗೂ ಶಿವಪುತ್ರಪ್ಪ ಬೆಳ್ಳೆ ಉಪಸ್ಥಿತರಿದ್ದರು. ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಶಿವಾ ಎಲ್. ಉಡಚಣ ಮತ್ತು ಡಾ. ಅವಿನಾಶ ದೇವನೂರ ಅವರಿಗೆ ತಲಾ ?೫,೦೦೦ ನಗದು ಸಹಿತ ಗೌರವ ಪುರಸ್ಕಾರ ನೀಡಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರನ್ನೂ ಸನ್ಮಾನಿಸಲಾಯಿತು.























