Home ಜಿಲ್ಲೆ ಗುರುಮಠಕಲ್ ನ ಖಾಸಮಠದಲ್ಲಿ ಶ್ರದ್ದಾ ಭಕ್ತಿಯಿಂದ ಬನ್ನಿ ಮುಡಿಯುವ ಹಬ್ಬ ಆಚರಣೆ

ಗುರುಮಠಕಲ್ ನ ಖಾಸಮಠದಲ್ಲಿ ಶ್ರದ್ದಾ ಭಕ್ತಿಯಿಂದ ಬನ್ನಿ ಮುಡಿಯುವ ಹಬ್ಬ ಆಚರಣೆ

ಗುರುಮಠಕಲ್: ವಿಜಯದಶಮಿ ಹಾಗೂ ದಸರ ಮಹೋತ್ಸವದ ಶುಭ ಸಂದರ್ಭದಲ್ಲಿ ನಗರದ ವೀರಶೈವ ಸಮಾಜದ ವತಿಯಿಂದ ಐತಿಹಾಸಿಕ ಮತ್ತು ಪವಿತ್ರ ಕ್ಷೇತ್ರವಾದ ಶ್ರೀ ಖಾಸಮಠದಲ್ಲಿ ಶ್ರದ್ಧಾ-ಭಕ್ತಿಯಿಂದ ಬನ್ನಿ ಮುಡಿಯುವ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಸಮಾಜದ ಅಧ್ಯಕ್ಷ ಶಿವಾನಂದ ಬೂದಿ ಅವರು, “ದಸರಾ ಮಹೋತ್ಸವವು ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸಾರುವ ಪವಿತ್ರ ಪರ್ವಕಾಲವಾಗಿದೆ. ಸನಾತನ ಸಂಸ್ಕೃತಿಯಲ್ಲಿ ಬನ್ನಿ ಅಂದರೆ ಶಮಿ ವೃಕ್ಷಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಮಹಾಭಾರತದ ಕಾಲದಲ್ಲಿ ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮಿ ವೃಕ್ಷದಲ್ಲಿ ಬಚ್ಚಿಟ್ಟು ನಂತರ ವಿಜಯ ಸಾಧಿಸಿದ್ದರು ಎಂಬ ನಂಬಿಕೆಯಿದೆ. ಬನ್ನಿ ಪತ್ರೆಯನ್ನು ಬಂಗಾರದ ಸಂಕೇತವೆAದು ಭಾವಿಸಿ ಪರಸ್ಪರ ಹಂಚಿಕೊಳ್ಳುವುದರಿAದ ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ, ಸಾಮರಸ್ಯ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಮ್ಮ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದು ತಿಳಿಸಿದರು.
ನಂತರ ಸಮಾಜದ ಪ್ರಮುಖರು ಹಾಗೂ ಸದ್ಭಕ್ತರು ಮಠದ ಮುಂಭಾಗದಲ್ಲಿರುವ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ
ಸಲ್ಲಿಸಿ, ಬನ್ನಿ ಪತ್ರೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ದಸರಾ ಹಬ್ಬವನ್ನು ವೈಭವದಿಂದ ಆಚರಿಸಿದರು.
ಈ ಪವಿತ್ರ ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಗಣ್ಯರು, ಹಿರಿಯರು ಹಾಗೂ ಗುರುಮಠಕಲ್ ನಗರದ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಬನ್ನಿ ಮುಡಿದು ಶುಭಾಶಯ ವಿನಿಮಯ ಮಾಡಿಕೊಂಡು ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿದರು.