
ಬೆಂಗಳೂರು,ಅ.೧೯: ನಾಡಿನೆಲ್ಲೆಡೆ ಆಯುಧ ಪೂಜೆ ಹಬ್ಬದ ಸಂಭ್ರಮ ಮನೆಮಾಡಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸೇರಿದಂತೆ ಹಲವೆಡೆ ಆಯುಧ ಪೂಜೆ ಸಡಗರದಿಂದ ಆಚರಿಸಲಾಯಿತು.
ವಿಜಯದಶಮಿಯ ಅಂಗವಾಗಿ ಮಳಿಗೆಗಳು, ಕೈಗಾರಿಕೆಗಳು, ಗೋದಾಮುಗಳು, ಕಚೇರಿಗಳು ಹಾಗೂ ವಾಹನಗಳಿಗೆ ಆಯುಧಪೂಜೆ ನೆರವೇರಿಸುವುದು ಸಂಪ್ರದಾಯವಾಗಿದ್ದು, ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತಮ್ಮ ಅಂಗಡಿಗಳು, ಕಚೇರಿಗಳು ಮತ್ತು ವಾಹನಗಳಿಗೆ ಪೂಜೆ ನೆರವೇರಿಸಿದರು.
ನಾಡಹಬ್ಬ ವಿಜಯದಶಮಿ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಕೆ.ಆರ್. ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರಂ ಹಾಗೂ ಗಾಂಧಿ ಬಜಾರ್ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನರು ಹೂವು, ಹಣ್ಣು, ಬೂದುಕುಂಬಳ, ನಿಂಬೆಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಮಧ್ಯರಾತ್ರಿಯಿಂದಲೇ ಹಬ್ಬದ ಖರೀದಿ ಭರಾಟೆ ಶುರುವಾಗಿದ್ದು, ಸಾವಿರಾರು ಜನರು ವಿವಿಧ ಬಗೆಯ ಹೂವು, ಹಣ್ಣುಗಳು, ಬೂದುಗುಂಬಳಕಾಯಿ, ನಿಂಬೆಹಣ್ಣು, ಬಾಳೆಕಂದು, ತುಳಸಿ ಹಾರ ಸೇರಿದಂತೆ ವಿಜಯದಶಮಿಗೆ ಅಗತ್ಯವಿರುವ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಕೆ.ಆರ್. ಮಾರ್ಕೆಟ್ನಲ್ಲಿ ತಾಜಾ ಮತ್ತು ವೈವಿಧ್ಯಮಯ ಹೂವುಗಳು, ಹಾರಗಳು ಹಾಗೂ ಪೂಜಾ ಸಾಮಗ್ರಿಗಳು ಸಗಟು ದರದಲ್ಲಿ ಲಭ್ಯವಿರುವುದರಿಂದ ಬೆಂಗಳೂರಿನ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ವಿಜಯದಶಮಿ ಪೂಜೆಗಾಗಿ ಜನರು ಉತ್ಸಾಹದಿಂದ ಸಿದ್ಧತೆ ನಡೆಸಿದ್ದಾರೆ.
ಈ ಬಾರಿ ಬರದ ಪರಿಣಾಮ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹೂವು ಮತ್ತು ಬೂದುಕುಂಬಳ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದ್ದು, ಹಬ್ಬದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಬ್ಬದ ಖರೀದಿ ಈಗಾಗಲೇ ಆರಂಭವಾಗಿದ್ದು, ನಾಳೆ ವೇಳೆಗೆ ಬೇಡಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿರುವುದರಿಂದ ಬೆಲೆಗಳೂ ಏರಿಕೆಯಾಗುವ ನಿರೀಕ್ಷೆಯಿದೆ.
ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿ ಹೂವಿನ ಬೆಲೆ ಕೆ.ಜಿ.ಗೆ ೨೦೦ರಿಂದ ೨೫೦ರವರೆಗೆ ತಲುಪಿದೆ. ಚೆಂಡು ಹೂವು ಕೆ.ಜಿ.ಗೆ ೬೦ರಂತೆ ಮಾರಾಟವಾಗುತ್ತಿದ್ದರೆ, ಮಲ್ಲಿಗೆ ಮೊಗ್ಗಿನ ಬೆಲೆ ಕೆ.ಜಿ.ಗೆ ೫೦೦ಕ್ಕೆ ಏರಿಕೆಯಾಗಿದೆ. ಸೇವಂತಿ ಹೂವಿನ ಒಂದು ಮಾರು ೧೦೦ರಿಂದ ೧೫೦ರವರೆಗೆ ಇದೆ. ಮಲ್ಲಿಗೆ ಹೂವು ಮೊಳಕ್ಕೆ ೬೦ರಿಂದ ೮೦ರವರೆಗೆ ಮಾರಾಟವಾಗುತ್ತಿದೆ. ಪೂಜೆಗೆ ಪ್ರಮುಖವಾಗಿ ಬಳಸುವ ನಿಂಬೆಹಣ್ಣಿನ ಬೆಲೆ ಒಂದಕ್ಕೆ ೮ರಿಂದ ೧೨ಕ್ಕೆ ಏರಿಕೆಯಾಗಿದೆ.
ಇನ್ನು ಗೌರಿಬಿದನೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿನ ಮಾರುಕಟ್ಟೆಗಳಿಗೆ ಹೂವು ಪೂರೈಕೆಯಾಗುತ್ತಿದೆ. ಆದರೂ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ವಿಜಯದಶಮಿ ದಿನ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಮತ್ತಷ್ಟು ಚುರುಕುಗೊಂಡಿದೆ.


























