
ಪುತ್ತೂರು: ಕಚೇರಿಗೆ ತೆರಳಿದ ಗಂಡ ಮನೆಗೆ ಬಂದಾಗ ಆತನ ಬ್ಯಾಗ್ ಪರಿಶೀಲನೆ ನಡೆಸಿ ಲಂಚ ಪಡೆದ ಹಣವಿದ್ದರೆ ಗೃಹಿಣಿ ವಿರೋಧಿಸಿದಾಗ ಮಾತ್ರ ಭಾರತದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರ ಸಭೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಯುವ ಸಂಸತ್ತು ಚರ್ಚಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರಕ್ಕೆ ಸಂಬAಧಿಸಿ ನಮ್ಮಲ್ಲಿ ಕಾನೂನುಗಳಿವೆ. ಆದರೆ ಯಾವುದೂ ಸರಿಯಾಗಿ ಅನುಷ್ಟಾನಗೊಳ್ಳುತ್ತಿಲ್ಲ. ಇಂದಿನ ಶಾಸಕರ ಆಸ್ತಿ ಗಮನಿಸಿದರೆ ಸಾವಿರಾರು ಕೋಟಿಗೂ ಅಧಿಕವಿರುತ್ತದೆ. ರಾಜಕಾರಣಿಗಳು ಮೌಲ್ಯಾಧಾರಿತ ನೆಲೆಯಲ್ಲಿ ಮಾದರಿಯಾಗಿರಬೇಕು. ಮತದಾರರು ಪಕ್ಷ-ಆಸ್ತಿ ನೋಡದೆ ವ್ಯಕ್ತಿತ್ವ ನೋಡಿ ಮತ ನೀಡಬೇಕು.ಹಾಗಾದಾಗ ಮಾತ್ರ ಉತ್ತಮ ನಾಯಕರ ಆಯ್ಕೆ ಸಾಧ್ಯ ಎಂದು ಅವರು ಹೇಳಿದರು.
ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮಾತನಾಡಿ, ಪ್ರಶ್ನಿಸುವ ಗುಣದಿಂದ ಹೊರತಾದ ಪ್ರಜಾಪ್ರಭುತ್ವವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಆದರೆ ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುವ ಕೆಲಸ ನಡೆದರೆ ಅದು ಪ್ರಜಾಪ್ರಭುತ್ವಕ್ಕೆ ಕಳಂಕ ಉಂಟುಮಾಡುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಮಾತನಾಡಿ, ಯುವಜನಾಂಗದಲ್ಲಿ ಜಾಗೃತಿ ಮೂಡಿಸುವ ಯುವ ಸಂಸತ್ ಸ್ಪರ್ಧೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ದೇಶದ ಭವಿಷ್ಯ ಬರೆಯುವ ಈ ವಿದ್ಯಾರ್ಥಿಗಳು ಇಂತಹ ಅವಕಾಶಗಳ ಸದುಪಯೋಗದ ಜತೆಗೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಗಳಾಗಬೇಕು ಎಂದರು.
ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ಸೋಲಲು ಪಕ್ಷ, ಜಾತಿಯ ಹಿನ್ನಲೆಯಲ್ಲಿ ಆಯ್ಕೆಯಾಗುವ ವ್ಯವಸ್ಥೆ ಕಾರಣವಾಗಿದೆ. ಇದು ಬದಲಾಗಬೇಕಾಗಿದೆ ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಎಸ್.ಬಿ ಕೂಡಲಗಿ ವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ ಸುರೇಶ್ ಸ್ವಾಗತಿಸಿದರು. ಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಸಂವಿಧಾನ ಪೀಠಿಕೆ ಪ್ರಮಾಣ ವಚನ ಬೋಧಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿಧಾನ ಸಭೆಯ ಅಣುಕು ಕಾರ್ಯಕಲಾಪಗಳ ಮೂಲಕ ಯುವ ಸಂಸತ್ ಸ್ಪರ್ಧೆಗಳು ನಡೆಯಿತು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

























