
ನವದೆಹಲಿ,ಅ.೫: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಅಮಾನತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದ್ದು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಚುನಾವಣಾ ಆಯೋಗ ಕೈಗೊಂಡಿರುವ ಯಾವುದೇ ನಿರ್ಧಾರ ಕಾನೂನಿಗೆ ಅನುಗುಣವಾಗಿಲ್ಲ ಎಂದು ವಿಚಾರಣೆಯ ಬಳಿಕ ಕಂಡುಬಂದರೆ, ಅಂತಹ ನಿರ್ಧಾರಗಳನ್ನು ರದ್ದುಪಡಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವು ಒಂದು ವಾರದೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠ ಸೂಚಿಸಿದೆ.
ಚುನಾವಣಾ ಆಯೋಗವು ಬಹುಸದಸ್ಯ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಅದರ ಅಧಿಕಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಏಕಾಂಗಿಯಾಗಿ ಚಲಾಯಿಸಬಹುದೇ ಎಂಬುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಸಮ್ಮತಿಯಿಲ್ಲದೆ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬುದು ಅರ್ಜಿದಾರರ ಆರೋಪವಾಗಿದೆ.
ಚುನಾವಣಾ ಆಯೋಗದ ವ್ಯವಹಾರಗಳು ಸಾಧ್ಯವಾದಷ್ಟು ಸರ್ವಾನುಮತದಿಂದ ನಡೆಯಬೇಕು; ಭಿನ್ನಾಭಿಪ್ರಾಯವಿದ್ದರೆ ಬಹುಮತದ ನಿರ್ಧಾರವೇ ಅಂತಿಮ ಎಂಬ ಕಾನೂನುಬದ್ಧ ವ್ಯವಸ್ಥೆಯನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಇಸಿ ಕೈಗೊಂಡಿರುವ ಕೆಲವು ನಿರ್ಧಾರಗಳಲ್ಲಿ ಈ ಪ್ರಕ್ರಿಯೆ ಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಕೋರಲಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತ ದೇಶವ್ಯಾಪಿ ವಿವಾದದ ಹಿನ್ನೆಲೆಯಲ್ಲಿ ಈ ಅರ್ಜಿ ಮಹತ್ವ ಪಡೆದಿದೆ. ಮತದಾರರ ಪಟ್ಟಿಯ ಪರಿಷ್ಕರಣೆ, ಹೆಸರು ಸೇರ್ಪಡೆ-ತೆಗೆದುಹಾಕುವಿಕೆ, ಪುನಃ ಹೆಸರು ಸೇರಿಸುವಿಕೆ ಹಾಗೂ ಸಂಬಂಧಿತ ಆಡಳಿತಾತ್ಮಕ ಕ್ರಮಗಳ ಕುರಿತು ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಕಳೆದ ೧೦ ತಿಂಗಳಲ್ಲಿ ಕನಿಷ್ಠ ೧೪ ಬಾರಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು ಎಂಬ ವರದಿಗಳೂ ವಿಚಾರಣೆಯ ಹಿನ್ನೆಲೆಯಲ್ಲಿವೆ.
ಆದರೆ, ಈ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಚುನಾವಣಾ ಆಯೋಗವು ಆಂತರಿಕ ಚರ್ಚೆಗಳಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಲಿಖಿತ ಅಭಿಪ್ರಾಯಗಳು ಸಹಜವಾಗಿದ್ದು, ಅಂತಿಮವಾಗಿ ಆಯೋಗದ ನಿರ್ಧಾರಗಳು ಕಾನೂನುಬದ್ಧವಾಗಿಯೇ ಮತ್ತು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಬಳಸುವ ಫಾರ್ಮ್೬ನಲ್ಲಿ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಕೇಳುವ ರೀತಿಯಲ್ಲಿ ಬದಲಾವಣೆ ಮಾಡಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.ಅರ್ಜಿಯ ಪ್ರಕಾರ, ಚುನಾವಣಾ ಆಯುಕ್ತ ವಿವೇಕ್ ಜೋಶಿ ಅವರು ಮೇ ೧೬ರಂದು ಫಾರ್ಮ್೬ನಲ್ಲಿ ಹೆಚ್ಚುವರಿ ವಿವರಗಳನ್ನು ಸೇರಿಸಲು ಅಗತ್ಯವಾದ ನಿಯಮ ತಿದ್ದುಪಡಿ ಮಾಡದೆ ರೂಪದಲ್ಲಿ ಬದಲಾವಣೆ ಮಾಡುವುದು ಕಾನೂನುಬದ್ಧವೇ ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮೇ ೧೯ರಂದು ಸುಖಬೀರ್ ಸಿಂಗ್ ಸಂಧು ಕೂಡ ಆ ಆಕ್ಷೇಪಣೆಗೆ ಸಮ್ಮತಿ ಸೂಚಿಸಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದಲ್ಲದೆ, ಚುನಾವಣಾ ದತ್ತಾಂಶವನ್ನು ಕೇಂದ್ರೀಕರಿಸುವ ಪ್ರಕ್ರಿಯೆ, ವ್ಯವಸ್ಥೆಗೆ ಪ್ರವೇಶ, ಚುನಾವಣಾ ಸಿಬ್ಬಂದಿಯ ಅಧಿಕಾರಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ಹೆಸರಿನಲ್ಲಿ ಸಲ್ಲಿಸಲಾದ ಕೆಲವು ಮೇಲ್ಮನವಿಗಳಿಗೂ ಸಂಬಂಧಿಸಿದ ಪ್ರಶ್ನೆಗಳನ್ನು ಅರ್ಜಿ ಎತ್ತಿದೆ.
ಅರ್ಜಿದಾರರು ಚುನಾವಣಾ ಆಯೋಗದ ನಿರ್ಧಾರಗಳ ಮೂಲ ದಾಖಲೆಗಳನ್ನು ನ್ಯಾಯಾಲಯಕ್ಕೆ ತರಿಸುವಂತೆ ಮನವಿ ಮಾಡಿದ್ದಾರೆ. ಸಭೆಯ ನಡಾವಳಿ, ಅಜೆಂಡಾ, ಅನುಮೋದನಾ ಪತ್ರಗಳು, ಕಡತ ಟಿಪ್ಪಣಿಗಳು, ಕೆಲಸ ಹಂಚಿಕೆ ಆದೇಶಗಳು, ಐಟಿ ಪ್ರವೇಶ ದಾಖಲೆಗಳು, ಸರ್ವರ್ ಲಾಗ್ಗಳು ಹಾಗೂ ಡೇಟಾಬೇಸ್ ಬದಲಾವಣೆಗಳ ಇತಿಹಾಸ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ಸಂರಕ್ಷಿಸುವಂತೆ ಕೋರಲಾಗಿದೆ.
ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಕೋರಿದ್ದ ಮನವಿಗೆ ಸುಪ್ರೀಂ ಕೋರ್ಟ್ ಈ ಹಂತದಲ್ಲಿ ಮಧ್ಯಂತರ ಆದೇಶ ನೀಡಿಲ್ಲ. ಮೊದಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಉತ್ತರ ಪಡೆಯಲು ನ್ಯಾಯಾಲಯ ನಿರ್ಧರಿಸಿದೆ.
ಅದೇ ವೇಳೆ, ಆಯೋಗದ ನಿರ್ಧಾರಗಳು ಅಗತ್ಯವಾದ ಸರ್ವಾನುಮತ ಅಥವಾ ಬಹುಮತದ ಪ್ರಕ್ರಿಯೆ ಅನುಸರಿಸದೆ ಕೈಗೊಳ್ಳಲಾಗಿದೆ ಎಂಬುದು ದಾಖಲೆಗಳ ಪರಿಶೀಲನೆಯಿಂದ ದೃಢಪಟ್ಟರೆ, ಅಂತಹ ನಿರ್ಧಾರಗಳನ್ನು ಹಿಂಪಡೆಯುವ ಅಥವಾ ರದ್ದುಪಡಿಸುವ ಸಾಧ್ಯತೆಯನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಸ್ಐಆರ್ ವಿರುದ್ಧ ಪ್ರತಿಪಕ್ಷಗಳು ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ನ ಈ ವಿಚಾರಣೆ ನಡೆದಿದೆ. ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳು ಸಿಇಸಿ ರಾಜೀನಾಮೆಗೆ ಆಗ್ರಹಿಸುತ್ತಿದ್ದರೆ, ಆಯೋಗವು ಮತದಾರರ ಪಟ್ಟಿಯ ಶುದ್ಧೀಕರಣ ಮತ್ತು ಅರ್ಹ ಮತದಾರರನ್ನು ಒಳಗೊಳ್ಳುವ ಉದ್ದೇಶದಿಂದಲೇ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ.
ಹೀಗಾಗಿ, ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ಸ್ವಾಯತ್ತತೆ, ಬಹುಸದಸ್ಯ ಆಯೋಗದ ಸಾಮೂಹಿಕ ನಿರ್ಧಾರ ಪ್ರಕ್ರಿಯೆ ಹಾಗೂ SIಖಗೆ ಸಂಬಂಧಿಸಿದ ನಿರ್ಧಾರಗಳ ಕಾನೂನುಬದ್ಧತೆ ಪ್ರಮುಖ ವಿಚಾರಗಳಾಗಿ ಮುಂದುವರಿಯಲಿವೆ.


























